ಚಿತ್ತೂರು, ಮಾ 27 (DaijiworldNews/DB): ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಮದನಪಲ್ಲಿ-ತಿರುಪತಿ ಹೆದ್ದಾರಿಯ ಬಳಿಯ ಬಕರಾಪೇಟ ಕಣುಮಾದಲ್ಲಿ ಬಸ್ ಕಂದಕಕ್ಕೆ ಉರುಳಿ ಬಿದ್ದ ಪರಿಣಾಮ 7 ಮಂದಿ ಸಾವನ್ನಪ್ಪಿ, 45ಕ್ಕೂ ಹೆಚ್ಚು ಮಂದಿ ಗಾಯಗೊಂಡ ಘಟನೆ ನಡೆದಿದೆ.
ಮಾಲಿಶೆಟ್ಟಿ ವೆಂಗಪ್ಪ (60), ಮಾಲಿಶೆಟ್ಟಿ ಮುರಳಿ (45), ಕಾಂತಮ್ಮ (40), ಮಾಲಿಶೆಟ್ಟಿ ಗಣೇಶ್ (40), ಜೆ. ಯಶಸ್ವಿನಿ (8), ಚಾಲಕ ನಬಿ ರಸೂಲ್ ಮತ್ತು ಕ್ಲೀನರ್ ಮೃತಪಟ್ಟವರು ಎಂದು ಗುರುತಿಸಲಾಗಿದೆ.
ಬಸ್ ನಲ್ಲಿ 63 ಮಂದಿ ಪ್ರಯಾಣಿಕರಿದ್ದರು. ಎಲ್ಲರೂ ತಿರುಚಾನೂರಿನಲ್ಲಿ ಭಾನುವಾರ ಬೆಳಗ್ಗೆ ನಡೆಯಲಿದ್ದ ಮದುವೆ ನಿಶ್ಚಿತಾರ್ಥಕ್ಕೆ ಸಾಗುತ್ತಿದ್ದರು. ಆದರೆ ನಿಶ್ಚಿತಾರ್ಥ ನಡೆಯುವಲ್ಲಿಗೆ ತಲುಪುವ ಮುನ್ನವೇ ದುರಂತ ಸಂಭವಿಸಿದೆ. ಚಾಲಕನ ಅತಿವೇಗದ ಚಾಲನೆಯೇ ದುರುಂತಕ್ಕೆ ಕಾರಣ ಎನ್ನಲಾಗಿದೆ.
ತಿರುವಿನಲ್ಲಿ ಬಸ್ ನಿಯಂತ್ರಣ ತಪ್ಪಿ, ಸುಮಾರು 100 ಅಡಿಯ ಕಣಿವೆಗೆ ಉರುಳಿದೆ ಎಂಬುದಾಗಿ ಮಾಹಿತಿ ಲಭ್ಯವಾಗಿದೆ. ಘಟನೆ ನಡೆದ ತತ್ ಕ್ಷಣ ಸ್ಥಳೀಯ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಗಾಯಾಳುಗಳನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದೆ.