National
ಪರಿಸರ ಪ್ಲಾಸ್ಟಿಕ್ ಮಯವಾಯಿತು... ಇದೀಗ ಮಾನವ ದೇಹದೊಳಗೂ ಹೊಕ್ಕ ಪ್ಲಾಸ್ಟಿಕ್..!
- Sat, Mar 26 2022 07:15:46 PM
-
ವಿಶೇಷ ವರದಿ: ಲೋಹಿತ್ ಕುಮಾರ್, ಕಲ್ಮಂಜ
ಮಂಗಳೂರು, ಮಾ 26 (DaijiworldNews/HR): ಹಚ್ಚ ಹಸುರಿನಿಂದ ಕೂಡಿದ್ದ ಪರಿಸರ, ನೀಲಿ ಬಣ್ಣದಿ ಕಂಗೊಳಿಸುತ್ತಿದ್ದ ಸಮುದ್ರ ಎಲ್ಲವೂ ಕೂಡಾ ಇಂದು ಪ್ಲಾಸ್ಟಿಕ್ ಮಯವಾಗಿಬಿಟ್ಟಿದೆ.! ಪ್ಲಾಸ್ಟಿಕ್ ಆವರಿಸಿಕೊಂಡಿದ್ದು ಮಾತ್ರವಲ್ಲದೆ ಮಾನವ ಜೀವನದ ಅವಿಭಾಜ್ಯ ಅಂಗವಾಗಿ ಮಾರ್ಪಟ್ಟಿದೆ. ಕುಡಿಯುವ ನೀರಿನಿಂದ ಹಿಡಿದು, ದಿನಬಳಕೆಯ ವಸ್ತುಗಳವರೆಗೆ, ಮೌಂಟ್ ಎವರೆಸ್ಟ್ ನ ತುತ್ತ ತುದಿಯಿಂದ ಹಿಡಿದು ಸಮುದ್ರದಾಳದವರೆಗೆ ಪ್ಲಾಸ್ಟಿಕ್ ತನ್ನ ಬಾಹುವನ್ನು ವಿಸ್ತರಿಸಿಕೊಂಡಿದೆ. ಪ್ಲಾಸ್ಟಿಕ್ ಬಗ್ಗೆ ಎಷ್ಟೇ ಅರಿವು ಮೂಡಿಸಿದರೂ ಸಹ ಅದರ ಬಳಕೆಯನ್ನು ಕಡಿಮೆ ಮಾಡಲು ಸಾಧ್ಯವೇ ಆಗದಷ್ಟರ ಮಟ್ಟಿಗೆ ನಾವು ಪ್ಲಾಸ್ಟಿಕ್ ಅನ್ನು ನೆಚ್ಚಿಕೊಂಡು ಬಿಟ್ಟಿದ್ದೇವೆ..! ಆದರೆ, ಅದರ ದುಷ್ಪರಿಣಾಮ ಮಾತ್ರ "ಅಣು ಬಾಂಬ್" ಗಿಂತಲೂ ಅಧಿಕವಾಗಿದೆ. ಇಂದು ಬಳಸುವ ಪ್ಲಾಸ್ಟಿಕ್ ಮುಂದಿನ ನೂರಾರು ವರ್ಷಗಳಿಗೆ ಪರಿಣಾಮವನ್ನು ತಂದಿಡಬಲ್ಲದು. ಇಂದು ಭೂಖಂಡಕ್ಕೆ ಮಾತ್ರಕ್ಕೆ ವ್ಯಾಪರಿಸಿರುವ ಪ್ಲಾಸ್ಟಿಕ್ ಕೆಲವೇ ವರ್ಷಗಳಲ್ಲಿ ಭೂಖಂಡಗಳ ಜತೆಗೆ ಜಲಗೋಳ, ವಾಯುಗೋಳವೂ ಪ್ಲಾಸ್ಟಿಕ್ಮಯವಾದರೆ ಆಶ್ಚರ್ಯಪಡಬೇಕಿಲ್ಲ. ಪ್ಲಾಸ್ಟಿಕ್ ಹೊರತಾದ ಜೀವನ ದುಸ್ತರವೆಂದೆನಿಸಿದರೂ ಕೂಡಾ ಅದರಷ್ಟು ಆರೋಗ್ಯಕರ ವಾತಾವರಣ ಮತ್ತು ನಮ್ಮ ಆರೋಗ್ಯದ ಜತೆಗೆ ಪರಿಸರವೂ ಕೂಡಾ ಶುದ್ಧವಾಗಿರದೆ ಇರದು..! ಸದ್ಯ ಭಾರತವನ್ನು "2022ರ ವೇಳೆಗೆ ಪ್ಲಾಸ್ಟಿಕ್ ಮುಕ್ತ ಭಾರತ" ಮಾಡಬೇಕೆನ್ನುವ ಪ್ರಧಾನಿಯವರ ಕನಸು ಸಾಕಾರಗೊಳ್ಳಬೇಕಾದರೆ ಭಾರತೀಯರಾದ ನಮ್ಮ ಮೇಲೆ ಮಹತ್ತರ ಜವಾಬ್ದಾರಿಯಿದೆ. ಭೂ ಮಂಡಲದ ಮೂಲಕ ಪ್ರಾಣಿಗಳ ಹೊಟ್ಟೆ ಸೇರಿದ್ದನ್ನು ಈ ಹಿಂದೆ ಮಾಹಿತಿ ಪಡೆದಿರುವ ನಾವುಗಳು ಇದೀಗ ಮಾನವ ದೇಹದಲ್ಲೂ ಕೂಡಾ ಪ್ಲಾಸ್ಟಿಕ್ ಇರುವ ಸತ್ಯವನ್ನು ಒಪ್ಪಿಕೊಳ್ಳಲೇಬೇಕಾದ ಅನಿವಾರ್ಯತೆಯಲ್ಲಿದೆ...
ಮಾನವ ದೇಹದೊಳಗೂ ನುಸುಳಿದ ವಿನಾಶಕಾರಿ ಪ್ಲಾಸ್ಟಿಕ್ :
ನಾವು ಬಿಸಾಕಿದ ಪ್ಲಾಸ್ಟಿಕ್ ಪ್ರಾಣಿಗಳ, ಜಲಚರಗಳ ದೇಹದೊಳಗೆ ಸೇರಿದ್ದು ಹಳೆಯ ಸುದ್ದಿಗಳು. ಜಗತ್ತಿನಲ್ಲಿ ಪ್ಲಾಸ್ಟಿಕ್ ಬಳಸುವ ಏಕೈಕ ಜೀವಿ ಮಾನವನಾಗಿದ್ದು, ಇದೀಗ ಸ್ವತ: ಮಾನವನ ದೇಹದೊಳಗೆಯೇ ಅಪಾಯಕಾರಿ ಪ್ಲಾಸ್ಟಿಕ್ ನುಸುಳಿರುವ ಬಗ್ಗೆ ಸಂಶೋಧನೆಗಳಿಂದ ದೃಢಪಟ್ಟಿದ್ದು, ಮಾನವ ಕುಲವೇ ಬೆಚ್ಚಿ ಬೀಳುವಂತಾಗಿದೆ. ಮಾನವನ ರಕ್ತದಲ್ಲಿ ಪ್ಲಾಸ್ಟಿಕ್ ಕಣಗಳ ಇರುವಿಕೆ ಸಂಶೋಧನೆಗಳಿಂದ ದೃಢಪಟ್ಟಿದ್ದು, ಮೈಕ್ರೋ ಪ್ಲಾಸ್ಟಿಕ್ ನ ಸೂಕ್ಷ್ಮ ಕಣಗಳು ಮಾನವನ ದೇಹದಲ್ಲಿ ಸೇರಿಕೊಂಡಿದ್ದು, ಪರೀಕ್ಷೆಗೊಳಪಟ್ಟ ಶೇ. 80ಕ್ಕೂ ಹೆಚ್ಚು ಮಂದಿಯಲ್ಲಿ ಪತ್ತೆಯಾಗಿದೆ. ಮೈಕ್ರೋ ಪ್ಲಾಸ್ಟಿಕ್ ಗಳು ದೇಹದ ತುಂಬೆಲ್ಲಾ ಸಂಚಾರ ಮಾಡಿ ಹಲವಾರು ಅಂಗಾಂಗಳಲ್ಲಿ ನೆಲೆಯೂರಿದೆ. ಆದರೆ, ಮಾನವ ದೇಹದಲ್ಲಿ ಸೇರಿರುವ ಪ್ಲಾಸ್ಟಿಕ್ ನಿಂದ ಆಗಬಹುದಾದ ಆರೋಗ್ಯ ಸಮಸ್ಯೆ ಮತ್ತು ದುಷ್ಪರಿಣಾಮಗಳ ಬಗ್ಗೆ ಇನ್ನಷ್ಟೇ ಸಂಶೋಧನೆಯಿಂದ ತಿಳಿಯಬೇಕಿದೆ. ಮೈಕ್ರೊ ಪ್ಲಾಸ್ಟಿಕ್ ಕಣಗಳು ಮಾನವ ದೇಹದ ಜೀವ ಕಣಗಳನ್ನು ಹಾನಿ ಪಡಿಸುತ್ತದೆ ಎಂಬ ಸತ್ಯವನ್ನು ತಜ್ಞರು ಕಂಡುಕೊಂಡಿದ್ದು, ಪ್ರಯೋಗಾಲಯಗಳ ಮೂಲಕವು ದೃಢಪಟ್ಟಿದೆ. ಸಂಶೋಧಕರು 22 ವಯಸ್ಕರ ರಕ್ತದ ಮಾದರಿಗಳನ್ನು ಪರೀಕ್ಷೆಗೆ ಒಳಪಡಿಸಿದ್ದರು ಇದರಲ್ಲಿ 17 ಮಂದಿಯ ರಕ್ತದಲ್ಲಿ ಪ್ಲಾಸ್ಟಿಕ್ ಕಣಗಳು ಕಂಡು ಬಂದಿವೆ. ಪ್ಲಾಸ್ಟಿಕ್ ಬಾಟಲ್ಗಳಲ್ಲಿ ನೀರು ಕುಡಿಯುವ ವೇಳೆ ಪ್ರತಿ ದಿನವು ಲಕ್ಷಾಂತರ ಪ್ಲಾಸ್ಟಿಕ್ ಕಣಗಳು ದೇಹ ಸೇರುತ್ತಿವೆ. ಮಕ್ಕಳ ದೇಹಕ್ಕೂ ಪ್ಲಾಸ್ಟಿಕ್ ಕಣಗಳು ಭಾರೀ ಪ್ರಮಾಣದಲ್ಲಿ ಸೇರುತ್ತಿವೆ ಎಂದು ಆತಂಕ ವ್ಯಕ್ತಪಡಿಸುತ್ತಾರೆ ತಜ್ಞರು. ಆಹಾರ ಸೇವಿಸುವ ಪ್ಲಾಸ್ಟಿಕ್ ಕಂಟೇನರ್, ಕವರ್ಗಳು, ಆಹಾರ ಪ್ಯಾಕಿಂಗ್ಗೆ ಬಳಸುವ ಪ್ಲಾಸ್ಟಿಕ್ ವಸ್ತುಗಳಲ್ಲಿ ಇರುವ ಕಣಗಳು ನೇರವಾಗಿ ಬಾಯಿಯ ಮೂಲಕ ದೇಹ ಸೇರುತ್ತಿದ್ದು, ಮಾನವ ದೇಹದ ಜೀವಕೋಶಗಳು ಪ್ಲಾಸ್ಟಿಕ್ ನಿಂದ ಹಾನಿಗೊಳಗಾಗುತ್ತಿದೆ. ಈ ಸಂಶೋಧನೆ ನಡೆಸುವ ವೇಳೆ ತಜ್ಞರು ಸ್ಟೀಲ್ನ ಸಿರೆಂಜ್ ಹಾಗೂ ಗಾಜಿನ ಬಾಟಲ್ಗಳನ್ನು ಬಳಸಿದ್ದರು. ಪ್ಲಾಸ್ಟಿಕ್ ಸಿರೆಂಜ್ ಹಾಗೂ ಬಾಟಲ್ ಬಳಸಿದರೆ ಅಲ್ಲಿಯೂ ಪ್ಲಾಸ್ಟಿಕ್ ಕಲಬೆರಕೆ ಆಗುವ ಸಾಧ್ಯತೆ ಇರುತ್ತೆ ಎಂದು ಮುನ್ನೆಚ್ಚರಿಕೆ ವಹಿಸಲಾಗಿತ್ತು. ಇನ್ನು ಪರೀಕ್ಷೆ ವೇಳೆ ಕೆಲವರ ರಕ್ತದಲ್ಲಿ 2 ರಿಂದ 3 ರೀತಿಯ ಪ್ಲಾಸ್ಟಿಕ್ ಕಣಗಳು ಕಂಡು ಬಂದಿದೆ. ಈ ಸಂಶೋಧನೆಯ ವೇಳೆ ಆರಂಭದಲ್ಲಿ ಸಂಶೋಧಕರಿಗೆ ರಕ್ತದಲ್ಲಿ ಪಾಲಿಮಾರ್ ಅಂಶಗಳು ಕಂಡು ಬಂತು. ಸಂಶೋಧನೆ ತೀವ್ರಗೊಳಿಸಿದ ವೇಳೆ ಪ್ಲಾಸ್ಟಿಕ್ ಕಣಗಳು ಪತ್ತೆಯಾದವು ಎನ್ನುತ್ತಾರೆ ನೆದರ್ಲೆಂಡ್ನ ಆಮ್ಸ್ಟರ್ಡ್ಯಾಂ ವಿವಿ ತಜ್ಞ ಪ್ರೊ. ಡಿಕ್ ವೆತಕ್. ಈ ಸಂಶೋಧನೆಯ ಹಂತ ಇಲ್ಲಿಗೆ ಮುಗಿಯದೆ, ಇನ್ನೂ ಅನೇಕ ವಿಧದಲ್ಲಿ ಸಂಶೋಧನೆಗಳು ನಡೆದು ಮಾನವ ದೇಹಕ್ಕೆ ಪ್ಲಾಸ್ಟಿಕ್ ಉಂಟುಮಾಡಬಹುದಾದ ಪರಿಣಾಮಗಳ ಬಗ್ಗೆ ತಿಳಿದುಕೊಳ್ಳಬೇಕಿದೆ.
1950ರಿಂದ ಈವರೆಗಿನ ಪ್ಲಾಸ್ಟಿಕ್ ತ್ಯಾಜ್ಯದಲ್ಲಿ 4 ಹಿಮಾಲಯ ಸೃಷ್ಟಿ ಮಾಡಬಹುದು :
ಮಗುವೊಂದು ಜನಿಸಿದರೆ ಆ ಮಗುವನ್ನು ತೊಟ್ಟಿಲಲ್ಲಿ ತೂಗಿಸುತ್ತಾರೆ, ಆ ತೊಟ್ಟಿಲೂ ಕೂಡಾ ಪ್ಲಾಸ್ಟಿಕ್ ನದ್ದೇ ಆಗಿದೆ. ಮಗು ಅಂಬೆ ಕಾಲೂರಿ ನಡೆದಾಡುವ ಮುಂಚೆಯೇ ಪ್ಲಾಸ್ಟಿಕ್ ನಿಂದ ನಿರ್ಮಿತವಾದ ಆಟ ಸಾಮಾಗ್ರಿಗಳನ್ನು ಮಗುವಿನ ಕೈಗೆ ನೀಡುತ್ತೇವೆ. ಅದನ್ನೇ ಬಾಯಲ್ಲಿ ಹಾಕಿಕೊಂಡು ಚೀಪಲು ಆರಂಭಿಸುವ ಮಗು ತನಗರಿವಿಲ್ಲದೆಯೇ ಪ್ಲಾಸ್ಟಿಕ್ ಅಂಶಗಳನ್ನು ತನ್ನ ದೇಹದೊಳಕ್ಕೆ ಸೇರಿಸಿಕೊಳ್ಳುತ್ತದೆ.! ಹುಟ್ಟಿದ ಮಗುವಿನಿಂದ ಹಿಡಿದು ಮಕ್ಕಳು, ಯುವಜನಾಂಗ, ಮುದುಕರು ಹೀಗೆ ಎಲ್ಲರೂ ಕೂಡಾ ಪ್ರತಿನಿತ್ಯವೂ ಪ್ಲಾಸ್ಟಿಕ್ ಅನ್ನು ಆಶ್ರಯಿಸಿಕೊಂಡಿದ್ದಾರೆ. ಇದೇ ಕಾರಣದಿಂದ ನಮ್ಮ ದೇಶದ ಕರಕುಶಲ ವಸ್ತುಗಳು ಕೂಡಾ ಅಳಿವಿನಂಚಿಗೆ ಹೋಗಿರುವುದು..! ದಿನ ನಿತ್ಯದ ಬದುಕಿನಲ್ಲಿ ನಾವು ಪ್ಲಾಸ್ಟಿಕ್ ಅನ್ನು ಬಳಸಿಕೊಂಡಿದ್ದರ ಪರಿಣಾಮವಾಗಿ ಅಂದರೆ 1950ರ ಬಳಿಕ ಜಾಗತಿಕವಾಗಿ 9 ಬಿಲಿಯನ್ ಟನ್ ಪ್ಲಾಸ್ಟಿಕ್ ಉತ್ಪಾದನೆಯಾಗಿದೆ. ಈ ಪ್ರಮಾಣ ಅತಿ ಎತ್ತರದ ಮೌಂಟ್ ಎವರೆಸ್ಟ್ನ ಎತ್ತರಕ್ಕೆ ಸಮವಾಗಿದೆ. ಈಗಾಗಲೇ 4 ಎವರೆಸ್ಟ್ ಪರ್ವತಗಳನ್ನು ಸೃಷ್ಟಿಸಬಹುದಾದಷ್ಟು ಪ್ಲಾಸ್ಟಿಕ್ ತ್ಯಾಜ್ಯವನ್ನು ಈ ಮಾನವ ಕುಲ ಸೃಷ್ಟಿಸಿದೆ. ಭಾರತದಲ್ಲಿ ಪ್ರತಿದಿನ 25,940 ಟನ್ ಪ್ಲಾಸ್ಟಿಕ್ ಉತ್ಪಾದನೆಯಾಗುತ್ತಿದೆ. ಇವುಗಳ ತೂಕ ಏಷ್ಯಾದ 9,000 ಆನೆಗಳಿಗೆ ಸಮ. ಆದರೆ ಇತರ ರಾಷ್ಟ್ರಗಳಿಗೆ ಹೋಲಿಸಿದರೆ ಭಾರತವೇ ಕಡಿಮೆ ಪ್ಲಾಸ್ಟಿಕ್ ಬಳಸುವ ದೇಶವಾಗಿದೆ ಎನ್ನುತ್ತದೆ ಅಧ್ಯಯನ. ವಿಶ್ವಸಂಸ್ಥೆಯ ಪ್ರಕಾರ ಜಗತ್ತಿನಾದ್ಯಂತ ಪ್ರತಿ ವರ್ಷ ಸುಮಾರು 5 ಲಕ್ಷ ಕೋಟಿ ಪ್ಲಾಸ್ಟಿಕ್ ಬ್ಯಾಗು ಗಳನ್ನು ಬಳಸ ಲಾಗುತ್ತದೆ. ಪ್ರತಿ ವರ್ಷ ಸಮುದ್ರಕ್ಕೆ 48 ಲಕ್ಷದಿಂದ 1 ಕೋಟಿ ಟನ್ ಪ್ಲಾಸ್ಟಿಕ್ ಸೇರುತ್ತಿದೆ. ವರ್ಷದಿಂದ ವರ್ಷಕ್ಕೆ ಇದರ ಪ್ರಮಾಣದಲ್ಲಿ ಶೇ. 10 ಹೆಚ್ಚಾಗುತ್ತಿದೆ. ಸಮುದ್ರಕ್ಕೆ ಪ್ಲಾಸ್ಟಿಕ್ ಸೇರಿದರೆ ಸಮುದ್ರ ಜೀವಿಗಳಿಗೆ ತೀರಾ ಅಪಾಯಕಾರಿಯಾಗುವುದರ ಜೊತೆಗೆ ಇದರ ನೇರ ದುಷ್ಪರಿಣಾಮವನ್ನು ಮಾನವನೇ ಎದುರಿಸಬೇಕಾಗುತ್ತದೆ.
ಭಾರತದಲ್ಲಿ ಸಿಂಗಲ್ ಯೂಸ್ ಪ್ಲಾಸ್ಟಿಕ್ ಗಳು ನಿಷೇಧ ...!
ಯಾವ ರಸ್ತೆಯಲ್ಲೇ ಸಂಚರಿಸಿ ಕಣ್ಣಿಗೆ ಕಾಣಸಿಗುವುದು ಕೇವಲ ಪ್ಲಾಸ್ಟಿಕ್ ಗಳು..! ಪ್ಲಾಸ್ಟಿಕ್ ಗಳ ರಾಶಿಯಿಂದ ಮನು ಕುಲ ಇಂದು ಅತ್ಯಂತ ಕೆಟ್ಟ ಪರಿಣಾಮವನ್ನು ಎದುರಿಸಬೇಕಾದಂತಹ ಸ್ಥಿತಿಗೆ ಬಂದು ತಲುಪಿದೆ. ಅದರಲ್ಲೂ ಒಂದೇ ಬಾರಿ ಬಳಕೆ ಮಾಡಿ ಎಸೆಯುವ, ತ್ಯಾಜ್ಯವಾಗುವ ಪ್ಲಾಸ್ಟಿಕ್ ಗಳು ಇಂದು ರಾಜಾರೋಶ ವರ್ತನೆಯನ್ನು ತೋರುತ್ತಿದೆ. ಆದರೆ, ನಮ್ಮ ಕೇಂದ್ರ ಸರಕಾರ ಪ್ಲಾಸ್ಟಿಕ್ ಬಳಕೆ ನಿಯಂತ್ರಿಸುವ ಸಲುವಾಗಿ ಅಕ್ಟೋಬರ್ 2ರ ಬಳಿಕ ಸಿಂಗಲ್ ಯೂಸ್ ಪ್ಲಾಸ್ಟಿಕ್ ಅನ್ನು ಪೂರ್ಣವಾಗಿ ನಿಷೇಧಿಸಿದೆ. ಒಟ್ಟು 12 ವಿಧದ ಸಿಂಗಲ್ ಯೂಸ್ ಪ್ಲಾಸ್ಟಿಕ್ (ಮರುಬಳಕೆ ಮಾಡಲಾಗದ ಪ್ಲಾಸ್ಟಿಕ್) ಬಳಕೆಯನ್ನು ನಿಷೇಧಿಸಲಾಗಿದೆ. ಈ ಪೈಕಿ ಪಾನೀಯಗಳ ಸರಬರಾಜಿಗೆ ಬಳಸುವ ಪ್ಲಾಸ್ಟಿಕ್ ಬಾಟಲಿಗಳು, ಅಂಲಕಾರಕ್ಕಾಗಿ ಬಳಸುವ ಥರ್ಮೋಕೋಲ್ ಮತ್ತು ಸಿಗರೇಟ್ ಬಟ್ಸ್ , ಹ್ಯಾಂಡ್ ಕವರ್ಗಳು ಸೇರಿವೆ. ಕ್ಯಾರಿ ಬ್ಯಾಗ್ ಗಳು (50 ಮೈಕ್ರಾನ್ ಗಿಂತ ಕಡಿಮೆ), ಪ್ಲಾಸ್ಟಿಕ್ ಬಟ್ಟಲುಗಳು, ಪೊಟ್ಟಣಕ್ಕೆ ಬಳಸಲಾಗುವು ಕವರ್ ಗಳು, ಫೋಮ್ಡ್ ಕಪ್ ಗಳು, ಸ್ಟ್ರಾ, ಯೂಸ್ ಆಂಡ್ ಥ್ರೋ ಪ್ಲಾಸ್ಟಿಕ್ ಕಪ್ ಗಳು, , ಬೋರ್ಡ್ ಗಳು, ಪ್ಲಾಸ್ಟಿಕ್ ಲ್ಯಾಮಿನೇಟೆಡ್ ಬಿಲ್ ಗಳು, ಆಕಾಶಬುಟ್ಟಿಗಳು, ಧ್ವಜಗಳು ಮತ್ತು ಮಿಠಾಯಿಗಳ ಹಾಕಲು ಬಳಸುವ ಪಾರದರ್ಶಕ ಪ್ಲಾಸ್ಟಿಕ್ ಕವರ್ ಗಳು; ಸಿಗರೇಟ್ ಬಟ್ಸ್ ಗಳು, ಪಾನೀಯಗಳಿಗಾಗಿ ಬಳಸುವ ಗ್ಲಾಸ್ ಗಳು ಮತ್ತು ರಸ್ತೆಬದಿಯ ಬ್ಯಾನರ್ಗಳನ್ನು ಮೊದಲ ಹಂತದಲ್ಲಿ ನಿಷೇಧಿಸಲು ಕೇಂದ್ರ ಸರ್ಕಾರ ಕ್ರಮ ಕೈಗೊಂಡಿದೆ. ಈ ಕ್ರಮವನ್ನು ಎಷ್ಟು ಪರಿಣಾಮಕಾರಿಯಾಗಿ ಜಾರಿಗೊಳಿಸಲಾಗುತ್ತದೆಯೋ ಅಷ್ಟರ ಮಟ್ಟಿಗೆ ಈ ಪರಿಸರ ಮತ್ತು ಪ್ರಾಣಿ ಕುಲದ ಆರೋಗ್ಯಕ್ಕೆ ಉಪಯೋಗವಾಗಲಿದೆ.
ಹಲವು ರಾಷ್ಟ್ರಗಳಲ್ಲಿ ಪ್ಲಾಸ್ಟಿಕ್ ಬ್ಯಾಗ್ ಸಂಪೂರ್ಣ ನಿಷೇಧ :
ನಾವು ಬಾಯಾರಿಕೆಯಾದಾಗ ಸಾಪ್ಟ್ ಡ್ರಿಂಕ್ಸ್ ಅಥವಾ ವಾಟರ್ ಬಾಟಲ್ ಮೊರೆ ಹೋಗುತ್ತೇವೆ. ಆದರೆ ಅದೇ ನೀರು ಅಥವಾ ತಂಪು ಪಾನೀಯ ನಮ್ಮ ಬಾಯಾರಿಕೆಯನ್ನು ಹೋಗಲಾಡಿಸುವುದರ ಜೊತೆಗೆ ಪ್ಲಾಸ್ಟಿಕ್ ಅನ್ನು ನಮ್ಮ ದೇಹದೊಳಕ್ಕೆ ಸೇರಿಸಿಬಿಡುತ್ತವೆ. ತಂಪು ಪಾನೀಯ ಕಂಪೆನಿಗಳು ಬಾಟಲಿಯ ಬದಲಿಗೆ ಪ್ಲಾಸ್ಟಿಕ್ ಬಳಕೆಗೆ 1970ರಲ್ಲಿ ಮುಂದಡಿಯಿಟ್ಟವು. ಆ ವೇಳೆಗೆ ಪ್ಲಾಸ್ಟಿಕ್ ಬಾಟಲಿಯ ನಿರ್ವಹಣೆಯ ಪ್ರಶ್ನೆ ಎದುರಾದಾಗ ಅಮೇರಿಕಾ ಸರಕಾರ ಪ್ಲಾಸ್ಟಿಕ್ ಬಾಟಲಿಗಳನ್ನು ಸಂಪೂರ್ಣವಾಗಿ ನಿಷೇಧಿಸಲು ಕ್ರಮ ಕೈಗೊಂಡಿತು. ಆದರೆ, ನಿರುದ್ಯೋಗ ಭೀತಿಯಿಂದಾಗಿ ತನ್ನ ಹೆಜ್ಜೆಯನ್ನು ಹಿಂದಡಿಯಿಟ್ಟಿತು. ಇಂತಹ ಕಾರಣಗಳಿಂದಾಗಿಯೇ ಇಂದು ಪ್ಲಾಸ್ಟಿಕ್ "ಅಪಾಯಕಾರಿ" ಎಂಬ ಅರಿವಿದ್ದರೂ ಕೂಡಾ ನಿಷೇಧದ ತೂಗುಗತ್ತಿಯಿಂದ ಬಚಾವ್ ಆಗುತ್ತಿರುವುದು. ವಿಶ್ವ ಸಂಸ್ಥೆಯ ವರದಿಯ ಪ್ರಕಾರ ಜಗತ್ತಿನಲ್ಲಿ ಪ್ರತೀ ವರ್ಷ ಸುಮಾರು 5 ಲಕ್ಷ ಕೋಟಿ ಪ್ಲಾಸ್ಟಿಕ್ ಬ್ಯಾಗು ಗಳನ್ನು ಬಳಸಲಾಗುತ್ತದೆ. ಇದು, ಮನುಕುಲ ಮಾತ್ರವಲ್ಲದೆ ಪರಿಸರ ಹಾಗೂ ಎಲ್ಲಾ ಜೀವಿಗಳಿಗೂ ಮಾರಕವಾಗಿದೆ. ಈ ಸತ್ಯವನ್ನು ಅರಿತುಕೊಂಡ ಬಾಂಗ್ಲಾದೇಶ 2002ರಲ್ಲಿ ಪ್ಲಾಸ್ಟಿಕ್ ಬ್ಯಾಗ್ಗಳನ್ನು ಸಂಪೂರ್ಣವಾಗಿ ನಿಷೇಧಿಸಿತ್ತು. ಅಂತಾರಾಷ್ಟ್ರೀಯ ಮಟ್ಟದಲ್ಲಿ ದೇಶವೊಂದು ಕೈಗೊಂಡ ಮೊದಲ ತೀರ್ಮಾನವು ಇದಾಗಿದೆ. ಜೊತೆಗೆ ಇಂದು ವಿಶ್ವಾದ್ಯಂತ 127 ದೇಶಗಳು ಪ್ಲಾಸ್ಟಿಕ್ ಬಳಕೆ ಮೇಲೆ ನಿರ್ಬಂಧ ಹೇರಿವೆ. ಬ್ಯಾಗ್ಗಳಿಗೆ ನಿಷೇಧವಿಲ್ಲದಿದ್ದರೂ ಅಲ್ಲಿನ ಕೆಲವು ರಾಜ್ಯಗಳು ನಿಷೇಧವನ್ನು ಹೇರಿವೆ. ಏಕಬಳಕೆ ಪ್ಲಾಸ್ಟಿಕ್ ಅನ್ನು ಆ್ಯಂಟಿಗುವಾ ಮತ್ತು ಬಬುಡ, ಚೀನ, ಕೊಲಂಬಿಯಾ, ರೊಮಾನಿಯಾ, ಸೆನೆಗಲ್, ರುವಾಂಡಾ, ದಕ್ಷಿಣ ಕೊರಿಯಾ, ಜಿಂಬಾಬ್ವೆ, ಟ್ಯುನೀಶಿಯಾ, ಸಮೋಹ, ಬಾಂಗ್ಲಾದೇಶ, ಕ್ಯಾಮರೂನ್, ಅಲ್ಬೇನಿಯಾ, ಜಾರ್ಜಿಯಾ ಸೇರಿದಂತೆ 27 ರಾಷ್ಟ್ರಗಳು ಸಂಪೂರ್ಣ ನಿಷೇಧ ಹೇರಿದೆ.
ಪ್ಲಾಸ್ಟಿಕ್ ಇಂದು ಮಾನವನ ದಿನಚರಿಯಲ್ಲಿ ಇರಲೇಬೇಕಾದಂತಹ ಅನಿವಾರ್ಯದಲ್ಲಿ ಸಿಲುಕಿಕೊಂಡಿದೆ. ಆದರೆ, ಇಂದು ನಾವು ನಮಗೆ ಅರಿವಿಲ್ಲದೆಯೇ ಅತ್ಯಂತ ಭಯಾನಕ ರೋಗಗಳಿಗೆ ನಮ್ಮನ್ನು ನಾವು ಪ್ಲಾಸ್ಟಿಕ್ ಬಳಕೆಯ ಮೂಲಕ ಸಮರ್ಪಿಸಿಕೊಳ್ಳುತ್ತಿದ್ದೇವೆ. ನಮ್ಮ ಮುಂದಿನ ಪೀಳಿಗೆಗಾಗಿ ಹಣ, ಆಸ್ತಿ ಅಂತಸ್ತನ್ನು ಕೂಡಿಡದೆ ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡುವುದರ ಮೂಲಕ ಆರೋಗ್ಯಕರ ವಾತಾವರಣ, ಪರಿಸರವನ್ನು ನಿರ್ಮಿಸಿಕೊಡುವ ಬಗ್ಗೆ ಚಿಂತಿಸಬೇಕಿದೆ. ಮಕ್ಕಳಿಗೆ ಪ್ಲಾಸ್ಟಿಕ್ ಆಟ ಸಾಮಾಗ್ರಿಗಳನ್ನು ನೀಡದೆ ಹೊರಾಂಗಣ ಆಟದಲ್ಲಿ ತಲ್ಲೀನಗೊಳಿಸುವ ಮೂಲಕ ಅವರ ಆರೋಗ್ಯದೆಡೆಗೆ ಗಮನ ಹರಿಸಲು ಚಿಂತಿಸಬೇಕಿದೆ. ಪ್ಲಾಸ್ಟಿಕ್ ನಿಷೇಧದ ಬಗ್ಗೆ ಕೇವಲ ಸರಕಾರ ಮಾತ್ರವಲ್ಲ ಸ್ವತ: ಜನರೇ ತಿರಸ್ಕಾರದ ಮನೋಸ್ಥರ್ಯವನ್ನು ಬೆಳೆಸಿಕೊಳ್ಳಬೇಕಾದ ಅನಿವಾರ್ಯತೆ ಇದೆ. ನಮ್ಮ ಆರೋಗ್ಯದ ದೃಷ್ಟಿಯಿಂದ ಮತ್ತು ನಮ್ಮ ಮುಂದಿನ ಪೀಳಿಗೆಯ ಭವಿಷ್ಯದ ಹಿತದೃಷ್ಟಿಯಿಂದ ಹಾಗೂ ನಮ್ಮ ಆರೋಗ್ಯಕರ ಪರಿಸರ ನಿರ್ಮಾಣಕ್ಕಾಗಿ ಇಂದಿನಿಂದಲೆ ಅನಗತ್ಯ ಪ್ಲಾಸ್ಟಿಕ್ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಿಕೊಳ್ಳಬೇಕಾಗಿದೆ.