ಡೆಹರಾಡೂನ್, ಮಾ 26 (DaijiworldNews/DB): ಉತ್ತರಾಖಂಡ ವಿಧಾನಸಭೆಯ ಸಭಾಪತಿಯಾಗಿ ಬಿಜೆಪಿ ಶಾಸಕಿ ರಿತು ಖಂಡೂರಿ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಆ ಮೂಲಕ ರಾಜ್ಯದ ಮೊದಲ ಮಹಿಳಾ ಸಭಾಪತಿ ಎನಿಸಿಕೊಂಡಿದ್ದಾರೆ.
ಈ ಹಿಂದೆ ಸಭಾಪತಿಯಾಗಿದ್ದ ಬಿಜೆಪಿಯ ಪ್ರೇಮ್ಚಾಂದ್ ಅಗರ್ವಾಲ್ ಅವರ ಕಾರ್ಯಾವಧಿ ಮಾರ್ಚ್ 10ಕ್ಕೆ ಮುಗಿದಿತ್ತು. ಈ ಹಿನ್ನೆಲೆಯಲ್ಲಿ ರಿತು ಆಯ್ಕೆ ನಡೆದಿದೆ. ರಿತು ಅವರು ಉತ್ತರಾಖಂಡ ಮಾಜಿ ಸಿಎಂ ಬಿ.ಸಿ. ಖಂಡೂರಿ ಅವರ ಪುತ್ರಿ.
ಕೋಟದ್ವಾರ ಕ್ಷೇತ್ರದಲ್ಲಿ ಚುನಾವಣೆ ಎದುರಿಸಿದ್ದ ಅವರು, ಮಾಜಿ ಸಚಿವ ಎಸ್.ಎಸ್. ನೇಗಿ ಅವರನ್ನು 3 ಸಾವಿರ ಮತಗಳ ಅಂತರದಿಂದ ಪರಾಭವಗೊಳಿಸಿದ್ದರು. ಯಮಕೇಶ್ವರ ಕ್ಷೇತ್ರದಿಂದ ಮೊದಲ ಬಾರಿಗೆ 2017ರಲ್ಲಿ ಶಾಸಕಿಯಾಗಿ ಆರಿಸಿ ವಿಧಾನಸಭೆಗೆ ಕಾಲಿಟ್ಟಿದ್ದರು.
ರಿತು ಅವರು ಸಭಾಪತಿಯಾಗಿ ಆಯ್ಕೆಯಾಗಿರುವುದಕ್ಕೆ ಸಂತಸ ವ್ಯಕ್ತಪಡಿಸಿದ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ, ಮಹಿಳೆಯೋರ್ವರು ಮೊದಲ ಬಾರಿಗೆ ಸಭಾಪತಿಯಾಗಿ ಅಧಿಕಾರ ವಹಿಸಿಕೊಂಡಿರುವುದು ಹೆಮ್ಮೆಯ ಕ್ಷಣ. ಉತ್ತರಾಖಂಡದ ಅಭಿವೃದ್ಧಿ ಬಯಸುವ ಎಲ್ಲಾ ಮಹಿಳೆಯರಿಗೆ ಈ ಗೌರವ ಸಲ್ಲುತ್ತದೆ ಎಂದರು.
ವಿಪಕ್ಷ ನಾಯಕರಾದ ಪ್ರೀತಮ್ ಸಿಂಗ್ ಮತ್ತು ಯಶ್ಪಾಲ್ ಆರ್ಯಾ ಅವರೂ ನೂತನ ಸಭಾಪತಿಯವರಿಗೆ ಶುಭಾಶಯ ಕೋರಿದರು.