ಕಾರವಾರ, ಮಾ 26 (DaijiworldNews/DB): ಸಿದ್ದರಾಮಯ್ಯ ಅವರ ಹೇಳಿಕೆ ಆಗಾಗ ಸ್ಪೋಟಗೊಳ್ಳುತ್ತಲೇ ಇರುವುದರಿಂದ ಬಿಜೆಪಿಗೆ ಲಾಭವಾಗುತ್ತದೆ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಮತ್ತು ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.
ಹಿಜಾಬ್ ವಿವಾದಕ್ಕೆ ಸಂಬಂಧಿಸಿದಂತೆ ಸಿದ್ದರಾಮಯ್ಯ ಹೇಳಿಕೆ ಕುರಿತು ಅವರು ಸುದ್ದಿಗಾರರೊಂದಿಗೆ ಮಾತನಾಡಿ, ನ್ಯಾಯಾಲಯದ ಆದೇಶ ಗೌರವಿಸುವ ಮಾನಸಿಕತೆ ಅವರಲ್ಲಿಲ್ಲ. ಯಾಕೆ ಹೀಗಾಗುತ್ತಿದೆ ಎಂಬುದನ್ನು ಅವರಲ್ಲೇ ಕೇಳಬೇಕು. ಆದಾಗ್ಯೂ ಆಗಾಗ ಅವರು ಏನಾದರೂ ಹೇಳಿಕೆ ನೀಡಿದರೆ ಅದರಿಂದ ಬಿಜೆಪಿಗೆ ಅನುಕೂಲವಾಗುತ್ತದೆ ಎಂದರು.
ಜಾತ್ರೆಗಳಲ್ಲಿ ಹಿಂದೂಯೇತರ ಧರ್ಮೀಯರಿಗೆ ವ್ಯಾಪಾರಕ್ಕೆ ಅವಕಾಶ ನಿರಾಕರಿಸುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಕಾಯ್ದೆಯಲ್ಲಿರುವಂತೆ ನಡೆದುಕೊಳ್ಳಲಾಗುತ್ತಿದೆ. ಕಾಂಗ್ರೆಸ್ ಅವಧಿಯಲ್ಲಿ ಮಾಡಿದ ಕಾಯ್ದೆಯನ್ನು ಅನುಷ್ಠಾನಕ್ಕೆ ತರಲಾಗುತ್ತಿದೆ ಎಂಬುದನ್ನು ಸಚಿವ ಮಾಧುಸ್ವಾಮಿಯವರು ಈಗಾಗಲೇ ಸ್ಪಷ್ಟಪಡಿಸಿದ್ದಾರೆ ಎಂದು ತಿಳಿಸಿದರು.
ಕಾನೂನು, ರಾಷ್ಟ್ರೀಯತೆಗೆ ಸವಾಲು ಹಾಕುವ ಯಾರೇ ಆಗಲಿ ಅಂತಹವರನ್ನು ಮಟ್ಟ ಹಾಕುವ ಕೆಲಸವನ್ನು ಪೊಲೀಸ್ ಇಲಾಖೆ ಮಾಡಲಿದೆ. ಸಾಮಾಜಿಕ ತಾಣಗಳನ್ನು ಜಾತಿ, ಧರ್ಮ, ದೇಶದ ವಿರುದ್ಧ ಬಳಸಿಕೊಂಡರೆ ಅಂತಹವರ ಮೇಲೆ ಮುಲಾಜಿಲ್ಲದೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಅವರು ಇದೇ ವೇಳೆ ವಿವರಿಸಿದರು.