ಬಾಗಲಕೋಟೆ, ಮಾ 26 (DaijiworldNews/DB): ಪಾಕಿಸ್ತಾನ ಗಣರಾಜ್ಯೋತ್ಸವದ ಸಂಭ್ರಮಾಚರಣೆಯ ಸಂದೇಶಗಳನ್ನು ವಾಟ್ಸಾಪ್ ಸ್ಟೇಟಸ್ ನಲ್ಲಿ ಹಾಕಿದ ಪ್ರಕರಣ ಸಂಬಂಧಿಸಿ ಮಹಿಳೆಯನ್ನು ಮುಧೋಳದಲ್ಲಿ ಬಂಧಿಸಲಾಗಿದೆ.
ಮಹಿಳೆ ಹಾಕಿರುವ ವಾಟ್ಸಾಪ್ ಸ್ಟೇಟಸ್
ಆರೋಪಿ ಮಹಿಳೆಯನ್ನು ಮುಧೋಳ ಪಟ್ಟಣದ ನಿವಾಸಿ ಕುತ್ಮಾ ಶೇಖ್ (25) ಎಂದು ಗುರುತಿಸಲಾಗಿದೆ. ಈಕೆ ಸ್ಥಳೀಯ ಮದರಸಾದಲ್ಲಿ ವಿದ್ಯಾರ್ಥಿಯಾಗಿದ್ದಾಳೆ. ಪಾಕಿಸ್ತಾನದಲ್ಲಿ ಮಾರ್ಚ್ 23 ರಂದು ಗಣರಾಜ್ಯೋತ್ಸವ ದಿನವಾಗಿದ್ದು, ಅಂದು ಈ ಮಹಿಳೆ ತನ್ನ ವಾಟ್ಸಾಪ್ ಸ್ಟೇಟಸ್ ನಲ್ಲಿ ಪಾಕ್ ಗಣರಾಜ್ಯೋತ್ಸವ ಶುಭಾಶಯ ತಿಳಿಸುವ ವಾಟ್ಸಾಪ್ ಸ್ಟೇಟಸ್ ಹಾಕಿಕೊಂಡಿದ್ದಳು. ಅಲ್ಲದೆ, ಅಲ್ಲಾಹನು ಪ್ರತಿ ದೇಶದಲ್ಲಿ ಏಕತೆ, ಶಾಂತಿ, ಸೌಹಾರ್ದ ನೀಡಲು ಎಂಬುದಾಗಿ ಹಾಕಿದ್ದಳು. ಇದನ್ನು ಗಮನಿಸಿದ ಅರುಣ್ ಭಜಂತ್ರಿ ಎನ್ನುವವರು ಪೊಲೀಸರಿಗೆ ದೂರು ಸಲ್ಲಿಸಿ ಸಾಕ್ಷಿಯನ್ನೂ ಒದಗಿಸಿದ್ದರು. ಇದೀಗ ಆಕೆಯ ವಿರುದ್ಧ ದೂರು ಬಂದ ಹಿನ್ನೆಲೆಯಲ್ಲಿ ಗುರುವಾರ ಪೊಲೀಸರು ಆಕೆಯನ್ನು ಬಂಧಿಸಿದ್ದಾರೆ.
ಭಾರತೀಯ ದಂಡ ಸಂಹಿತೆ(IPC) ಸೆಕ್ಷನ್ 153(A) (ಧರ್ಮ, ಜನಾಂಗ, ಹುಟ್ಟಿದ ಸ್ಥಳ, ವಾಸಸ್ಥಳದ ಆಧಾರದ ಮೇಲೆ ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವುದು) ಮತ್ತು 505(2) (ಹಗೆತನ, ದ್ವೇಷ ಸೃಷ್ಟಿಸುವ ಅಥವಾ ಉತ್ತೇಜಿಸುವ ಹೇಳಿಕೆಗಳನ್ನು ನೀಡುವುದು) ಅಡಿ ಮಹಿಳೆಯ ವಿರುದ್ಧ ದೂರು ದಾಖಲು ಮಾಡಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.