ವಿಜಯಪುರ, ಮಾ 26 (DaijiworldNews/DB): ಇಳಿ ವಯಸ್ಸಿನಲ್ಲೂ ಎಳೆ ವಯಸ್ಸಿನ ಉತ್ಸಾಹದೊಂದಿಗೆ ಹಿರಿಯ ನಾಗರಿಕರಿಬ್ಬರು ಸ್ನಾತಕೋತ್ತರ ಪರೀಕ್ಷೆ ಬರೆದ ಸ್ಫೂರ್ತಿದಾಯಕ ಬೆಳವಣಿಗೆ ವಿಜಯಪುರದಲ್ಲಿ ನಡೆದಿದೆ. ಸರ್ಕಾರಿ ನೌಕರಿಯಲ್ಲಿದ್ದು ನಿವೃತ್ತರಾದ ಬಳಿಕವೂ ಓದುವ ಛಲ ಹೊಂದುವ ಮೂಲಕ ಯುವಕರಿಗೆ ಪ್ರೇರಣೆಯಾಗಿದ್ದಾರೆ.
ಆರೋಗ್ಯ ಇಲಾಖೆಯ ನಿವೃತ್ತ ನೌಕರ 81 ವರ್ಷದ ನಿಂಗಯ್ಯ ಬಸಯ್ಯ ಒಡೆಯರ ಮತ್ತು ಸಿಂದಗಿ ಆರ್.ಡಿ.ಪಾಟೀಲ ಪದವಿ ಪೂರ್ವ ಕಾಲೇಜಿನಲ್ಲಿ ಉಪನ್ಯಾಸಕ ಸೇವೆ ಸಲ್ಲಿಸಿದ್ದ 66 ವರ್ಷದ ಪರಸಪ್ಪ ಮಡಿವಾಳರ ಅವರೇ ಈ ಉತ್ಸಾಹದಾಯಕ ಹಿರಿಯ ನಾಗರಿಕರು.
ನಿಂಗಯ್ಯ ಅವರು ನಗರದ ಬಿಎಲ್ಡಿಇ ಸಂಸ್ಥೆಯ ಜೆಎಸ್ಎಸ್ ಶಿಕ್ಷಣ ಮಹಾವಿದ್ಯಾಲಯದಲ್ಲಿ ನಡೆದ ಟಿಇಇ ಪರೀಕ್ಷೆಯಲ್ಲಿ ಎಂ.ಎ. ಇಂಗ್ಲೀಷ್ ಪರೀಕ್ಷೆ ಬರೆದಿದ್ದಾರೆ. ಇಗ್ನೋ ದಿಂದ 4 ಸ್ನಾತಕೋತ್ತರ ಪದವಿ ಪಡೆದಿರುವ ಇವರು ನಿವೃತ್ತಿ ನಂತರವೂ ಸ್ನಾತಕೋತ್ತರ ಪದವಿ ಪಡೆಯುವ ಹಂಬಲದೊಂದಿಗೆ ಪರೀಕ್ಷೆ ಎದುರಿಸಿದ್ದಾರೆ. ಪರಸಪ್ಪ ಅವರೂ ಇಂಗ್ಲಿಷ್ ಸ್ನಾತಕೋತ್ತರ ಪರೀಕ್ಷೆ ಬರೆದಿದ್ದಾರೆ.
ಇಂಗ್ಲಿಷ್ ಭಾಷೆಯಲ್ಲಿ ಹೆಚ್ಚಿನ ಜ್ಞಾನ ಸಂಪಾದನೆ ಮಾಡುವ ಉದ್ದೇಶ ಇಬ್ಬರದೂ.
ನಿವೃತ್ತಿ ಇರುವುದು ವೃತ್ತಿಗೆ ಮಾತ್ರ. ಜ್ಞಾನಕ್ಕಲ್ಲ. ಚಟುವಟಿಕೆ, ಕ್ರಿಯಾಶೀಲತೆ, ಏಕಾಗ್ರತೆ ಮತ್ತು ಜೀವನದಲ್ಲಿ ಉತ್ಸಾಹದಿಂದಿರಲು ಶೈಕ್ಷಣಿಕ ಜ್ಞಾನ ಅಗತ್ಯ ಎನ್ನುತ್ತಾರೆ ಇಬ್ಬರು ಹಿರಿಯ ನಾಗರಿಕರು.