ಕೋಲ್ಕತಾ, ಮಾ 26 (DaijiworldNews/HR): ಬಿರ್ ಭೂಮ್ ಹಿಂಸಾಚಾರ ಮತ್ತು ಹತ್ಯಾಕಾಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಎಫ್ ಐಆರ್ನಲ್ಲಿ 21 ಮಂದಿ ಆರೋಪಿಗಳನ್ನು ಹೆಸರಿಸಿರುವುದಾಗಿ ಇಂದು ಮಾಹಿತಿ ನೀಡಿದೆ.
ಕೋಲ್ಕತಾ ಹೈಕೋರ್ಟ್ ಬಿರ್ ಭೂಮ್ ಹತ್ಯಾಕಾಂಡ ಹಿಂಸಾಚಾರ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಿ ಆದೇಶ ನೀಡಿದ್ದು, ಪಶ್ಚಿಮಬಂಗಾಲ ಸರಕಾರವು ಸಿಬಿಐಗೆ ಸಂಪೂರ್ಣ ಸಹಕಾರ ನೀಡಬೇಕು ಎಂದು ಹೈಕೋರ್ಟ್ ಸಲಹೆ ನೀಡಿತ್ತು.
ಈ ಕುರಿತು ಪಶ್ಚಿಮಬಂಗಾಳ ಡಿಜಿಪಿ ಮನೋಜ್ ಮಾಲ್ವಿಯಾ ಮಾಹಿತಿ ನೀಡಿದ್ದು, ಹಿಂಸಾಚಾರದಲ್ಲಿ ಎಂಟು ಮಂದಿ ಸಜೀವವಾಗಿ ದಹನವಾಗಿರುವ ಘಟನೆ ನಡೆದ ಬಿರ್ ಭೂಮ್ ಜಿಲ್ಲೆಯ ಬೋಗ್ಟುಯಿ ಗ್ರಾಮಕ್ಕೆ ಸಿಬಿಐ ತಂಡ ಭೇಟಿ ನೀಡಿ ತನಿಖೆಯನ್ನು ಆರಂಭಿಸಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈವರೆಗೆ 11 ಮಂದಿಯನ್ನು ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ.
ಇನ್ನು ಟಿಎಂಸಿ ಮುಖಂಡನ ಹತ್ಯೆ ಬಳಿಕ ಮಾರ್ಚ್ 21ರಂದು ಬಿರ್ ಭೂಮ್ ನಲ್ಲಿ ಅಪರಿಚಿತ ವ್ಯಕ್ತಿಗಳು ಹತ್ತು ಮನೆಗಳಿಗೆ ಬೆಂಕಿ ಹಚ್ಚಿದ್ದು, ಘಟನೆಯಲ್ಲಿ ಮಹಿಳೆಯರು, ಮಕ್ಕಳು ಸೇರಿದಂತೆ ಎಂಟು ಮಂದಿ ಸಜೀವವಾಗಿ ದಹನಗೊಂಡಿದ್ದರು.