ತಿರುಪತಿ, ಮಾ 26 (DaijiworldNews/DB): ವೃತ್ತ ನಿರೀಕ್ಷಕರೊಬ್ಬರು ಠಾಣೆಯಲ್ಲಿದ್ದ 15 ಲಕ್ಷ ರೂಪಾಯಿ ಹಣದ ಜತೆಗೆ ಪರಾರಿಯಾಗಿರುವ ಘಟನೆ ಕರ್ನೂಲ್ ತಾಲೂಕು ಪೊಲೀಸ್ ಠಾಣೆಯಲ್ಲಿ ನಡೆದಿದೆ. ಪರಾರಿಯಾದ ವೃತ್ತ ನಿರೀಕ್ಷಕನನ್ನು ಸದ್ಯ ಪೊಲೀಸರು ಹುಡುಕಾಡುತ್ತಿದ್ದಾರೆ.
ಪರಾರಿಯಾದ ವೃತ್ತ ನಿರೀಕ್ಷಕನನ್ನು ಕಂಬಗಿರಿ ರಾಮುಡು ಎಂಬುದಾಗಿ ಗುರುತಿಸಲಾಗಿದೆ. ಕೆಲ ದಿನಗಳ ಹಿಂದೆ ನಗರದ ಹೊರವಲಯದ ಪಂಚಲಿಂಗಲ ಚೆಕ್ಪೋಸ್ಟ್ ಬಳಿ ತಪಾಸಣೆ ವೇಳೆ ತಮಿಳುನಾಡು ಮೂಲದ ಸತೀಶ್ ಬಾಲಕೃಷ್ಣನ್ ಅವರಿಗೆ ಸೇರಿದ ವಾಹನವೊಂದರಲ್ಲಿ ಒಟ್ಟು 75 ಲಕ್ಷ ರೂ. ಹಣ ಪತ್ತೆಯಾಗಿತ್ತು. ಆದರೆ ಈ ಪೈಕಿ 15 ಲಕ್ಷ ರೂ. ಗಳ ಸಹಿತ ರಾಮುಡು ನಾಪತ್ತೆಯಾಗಿದ್ದಾರೆ.
ಆದರೆ ಬಳಿಕದ ಬೆಳವಣಿಗೆಯಲ್ಲಿ ಪೊಲೀಸರು ವಶಪಡಿಸಿಕೊಂಡ ಹಣಕ್ಕೆ ಸಂಬಂಧಿಸಿದಂತೆ ಎಲ್ಲಾ ದಾಖಲೆಗಳನ್ನು ನಾನು ನೀಡಿದ್ದೆ. ಆದರೆ ರಾಮುಡು ಇದಕ್ಕೊಪ್ಪದೆ ಹಿರಿಯ ಪೊಲೀಸ್ ಅಧಿಕಾರಿಗಳ ಹೆಸರು ಹೇಳಿ 15 ಲಕ್ಷ ರೂ.ಗಳನ್ನು ನೀಡಬೇಕು ಎಂದಿದ್ದ ಎಂದು ಸತೀಶ್ ಬಾಲಕೃಷ್ಣನ್ ದೂರು ನೀಡಿದ್ದಾರೆ.
ಸತೀಶ್ ಬಾಲಕೃಷ್ಣನ್ ಹಣ ನೀಡದೇ ಇದ್ದಾಗ ರಾಮುಡು ಅವರು ತಮ್ಮ ಸರ್ಕಾರಿ ಸಿಮ್ ನ್ನು ಕಳಚಿಟ್ಟು, ವಶಪಡಿಸಿಕೊಳ್ಳಲಾದ ಹಣದಿಂದ 15 ಲಕ್ಷ ರೂ. ಹಣವನ್ನು ತೆಗೆದುಕೊಂಡು ಪರಾರಿಯಾಗಿದ್ದಾರೆ ಎಂದಿದ್ದಾರೆ. ಈ ಹಿನ್ನೆಲೆಯಲ್ಲಿ ಪೊಲೀಸರು ದೂರು ದಾಖಲಿಸಿಕೊಂಡಿದ್ದು, ರಾಮುಡು ಪತ್ತೆಗೆ ವಿಶೇಷ ತಂಡ ರಚಿಸಿ ಕಳುಹಿಸಲಾಗಿದೆ.