ಬೆಂಗಳೂರು, ಮಾ 26 (DaijiworldNews/DB): ಕರ್ನಾಟಕದಲ್ಲಿರುವುದು ಡಬಲ್ ಎಂಜಿನ್ ಸರ್ಕಾರ. ಇಲ್ಲಿ ಡಬಲ್ ದೋಖಾ ನಡೆಯುತ್ತಿದೆ ಎಂದು ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಲೇವಡಿ ಮಾಡಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಶನಿವಾರ ಮಾತನಾಡಿದ ಅವರು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬಜೆಟ್ ನಲ್ಲಿ ಘೋಷಿಸಿದ ಯಾವುದೇ ಯೋಜನೆಗಳ ಅನುಷ್ಠಾನದ ಬಗ್ಗೆ ಸ್ಪಷ್ಟ ಮಾಹಿತಿ ನೀಡಿಲ್ಲ. ಸರ್ವವ್ಯಾಪಿ, ಸರ್ವಸ್ಪರ್ಶಿ ಎಂಬುದು ಬಾಯಿ ಮಾತಿಗಷ್ಟೇ ಸೀಮಿತವಾಗಿದೆ. ಡಬಲ್ ಎಂಜಿನ್ ಸರ್ಕಾರದಲ್ಲಿ ಎಲ್ಲವೂ ಡಬಲ್ ಖೋತಾ ಎಂದು ಆಪಾದಿಸಿದರು.
ಪ್ರತಿ ವರ್ಷ ಎರಡು ಕೋಟಿ ಉದ್ಯೋಗ ಸೃಷ್ಟಿ ಎಂದಿದ್ದಾರೆ. ಆದರೆ, ಸದ್ಯ ಹಲವರು ನಿರುದ್ಯೋಗಿಗಳಾಗಿದ್ದಾರೆ. ನಾಲ್ಕು ಲಕ್ಷ ಮಂದಿ ಕೊರೊನಾದಿಂದಾಗಿ ರಾಜ್ಯದಲ್ಲಿ ಉದ್ಯೋಗ ಕಳೆದುಕೊಂಡಿದ್ದಾರೆ. ಪ್ರವಾಸೋದ್ಯಮ, ಹೊಟೇಲ್ ಸಿಬಂದಿ, ಟೆಕ್ಸ್ ಟೈಲ್ಸ್ ಕ್ಷೇತ್ರ, ಚಾಲಕರು ಸೇರಿದಂತೆ ಹಲವರು ನಿರುದ್ಯೋಗಿಗಳಾಗಿದ್ದಾರೆ. ಆದರೆ ಉದ್ಯೋಗ ಸೃಷ್ಟಿಗೆ ಸರ್ಕಾರ ಒತ್ತು ನೀಡದೆ ಜನರ ಬಾಳಲ್ಲಿ ಚೆಲ್ಲಾಟವಾಡುತ್ತಿದೆ ಎಂದು ವಾಗ್ದಾಳಿ ನಡೆಸಿದರು.
ಉದ್ಯಮಶೀಲತಾ ಯೋಜನೆಯಡಿ ಓರ್ವ ವೈದ್ಯ, ನರ್ಸ್, 16 ಮನೆ ಕೆಲಸದವರನ್ನು ಅಬುದಾಬಿಗೆ ಮನೆ ಕೆಲಸಕ್ಕೆ ಕಳಿಸಲು ರಾಜ್ಯ ಸರ್ಕಾರ 6.5 ಕೋಟಿ ರೂ. ಖರ್ಚು ಮಾಡಿದೆ. ಇದೇ ಅವರ ದೊಡ್ಡ ಸಾಧನೆಯಾಗಿದೆ ಎಂದು ಪ್ರಿಯಾಂಕ್ ಖರ್ಗೆ ಲೇವಡಿ ಮಾಡಿದರು.
ಉದ್ಯೋಗಾವಕಾಶ ಕಲ್ಪಿಸುವ ತರಬೇತಿ ಮತ್ತು ಉದ್ಯೋಗ ಇಲಾಖೆಯಲ್ಲೇ ಉದ್ಯೋಗ ಕೊರತೆ ಎದ್ದು ಕಾಣುತ್ತಿದೆ. ಇಲಾಖೆಯಲ್ಲರುವ 6187 ಸ್ಥಾನಗಳ ಪೈಕಿ ಭರ್ತಿಯಾಗಿರುವುದು 2544 ಹುದ್ದೆ ಮಾತ್ರ. 3643 ಹುದ್ದೆಗಳು ಇನ್ನೂ ಭರ್ತಿಯಾಗದೆ ಹಾಗೇ ಉಳಿದಿವೆ. ಹೀಗಿರುವಾಗ ಉಳಿದ ಕಡೆ ಹೇಗೆ ಉದ್ಯೋಗ ಲಭಿಸುತ್ತದೆ ಎಂದವರು ಪ್ರಶ್ನಿಸಿದರು.