ಬೆಂಗಳೂರು, ಮಾ 26 (DaijiworldNews/DB): ಕೆಲಸದಿಂದ ವಜಾ ಮಾಡಿದ್ದಕ್ಕೆ ಕೋಪಗೊಂಡು ಸಂಸ್ಥೆಯ ಮಾನವ ಸಂಪನ್ಮೂಲ ವಿಭಾಗದ ಅಧಿಕಾರಿಯ ಕೊಲೆಗೆ ಯತ್ನಿಸಿದ ಆರೋಪಿ ಮತ್ತು ಆತನ ಸಹಚರರನ್ನು ಬಾಗಲೂರು ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಮಧು (30) ಎಂದು ಗುರುತಿಸಲಾಗಿದೆ. ಈತ ರಕ್ಷಣಾ ಸಾಮಾಗ್ರಿ ತಯಾರಿಕಾ ಕಂಪನಿಯಲ್ಲಿ ಉದ್ಯೋಗಿಯಾಗಿದ್ದ. ಕಂಪೆನಿ ನಿಯಮಗಳನ್ನು ಉಲ್ಲಂಘಿಸಿ ಕಂಪೆನಿ ಆವರಣದಲ್ಲಿ ವೀಡಿಯೋ ಶೂಟಿಂಗ್ ಮಾಡಿದ ಕಾರಣಕ್ಕಾಗಿ ಎಚ್ ಆರ್ ರಾಜಶೇಖರ ರೈ ಅವರು ಆತನನ್ನು ಕೆಲಸದಿಂದ ವಜಾ ಮಾಡಿದ್ದರು. ಇದರಿಂದ ಕೋಪಗೊಂಡಿದ್ದ ಮಧು ಮಾರ್ಚ್ 8 ರಂದು ತನ್ನ ಮೂವರು ಸ್ನೇಹಿತರೊಂದಿಗೆ ಸೇರಿ ಎಚ್ ಆರ್ ರಾಜಶೇಖರ್ ರೈ ಅವರ ಹತ್ಯೆಗೆ ಯತ್ನಿಸಿದ್ದ. ರಾಜಶೇಖರ್ ಅವರ ಕಾರು ಅಡ್ಡಗಟ್ಟಿ ಕೊಲೆಗೆ ಯತ್ನಿಸಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಆದರೆ ಕಾರು ಚಾಲಕನ ಸಮಯಪ್ರಜ್ಞೆಯಿಂದಾಗಿ ಈ ಹತ್ಯಾಯತ್ನ ವಿಫಲವಾಗಿತ್ತು. ಬಳಿಕ ರಾಜಶೇಖರ್ ತಪ್ಪಿಸಿಕೊಂಡು ನೇರವಾಗಿ ಬಾಗಲೂರು ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದರು. ಬಳಿಕ ಆರೋಪಿಗಳು ರಾಜಶೇಖರ್ ಮನೆ ಮುಂದೆಯೂ ಕಾದಿದ್ದರು. ಈ ವೇಳೆ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.