ಬೆಂಗಳೂರು, ಮಾ 26 (DaijiworldNews/MS): ಹೈಕೋರ್ಟ್ ತೀರ್ಪಿನ ಬಳಿಕ ಹಿಜಾಬ್ ವಿವಾದ ತಣ್ಣಗಾಗಿತ್ತು. ಆದರೆ ಹಿಜಾಬ್ ಧರಿಸಲು ಅವಕಾಶ ನೀಡಿ ಎಂದು ಸಿದ್ದರಾಮಯ್ಯ ಈಗ ಏಕಪಾತ್ರಾಭಿನಯ ಆರಂಭಿಸಿದ್ದಾರೆ. ಜಟ್ಟಿ ನೆಲಕ್ಕೆ ಬಿದ್ದರೂ ಮೀಸೆ ಮಣ್ಣಾಗಿಲ್ಲ ಎಂದು ವಿಪಕ್ಷ ನಾಯಕನ ವಿರುದ್ದ ಬಿಜೆಪಿ ಕಿಡಿಕಾರಿದೆ.
ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಬಿಜೆಪಿ ರಾಜ್ಯ ಘಟಕ, " ಜಟ್ಟಿ ನೆಲಕ್ಕೆ ಬಿದ್ದರೂ ಮೀಸೆ ಮಣ್ಣಾಗಿಲ್ಲ ಎಂಬಂತಿದೆ ಸಿದ್ದರಾಮಯ್ಯ ಅವರ ಧೋರಣೆ ಈ ಹಿಂದೆ ಹಲವು ಮಠಾಧೀಶರ ವಿರುದ್ಧ ಅಗೌರವಯುತವಾಗಿ ನಡೆದುಕೊಂಡಿದ್ದ ಸಿದ್ದರಾಮಯ್ಯ ಅವರು ಈಗ ಸ್ವಾಮೀಜಿಗಳ ಮೌನವನ್ನೂ ತಮ್ಮ ರಕ್ಷಣೆಗೆ ಬಳಸಿಕೊಳ್ಳುತ್ತಿದ್ದಾರೆ" ಎಂದು ಆರೋಪಿಸಿದೆ.
ಸ್ವಾಮೀಜಿಗಳ ಶಿರವಸ್ತ್ರದ ಬಗ್ಗೆ ವ್ಯಂಗ್ಯವಾಡುವ ಸಿದ್ದರಾಮಯ್ಯ ಈ ಹಿಂದೆ ವೀರಶೈವ ಲಿಂಗಾಯತ ಸ್ವಾಮೀಜಿಗಳ ಹೆಸರನ್ನು ತಮ್ಮಮತ ರಾಜಕಾರಣಕ್ಕೆ ಬಳಸಿಕೊಳ್ಳುವ ವಿಫಲ ಯತ್ನ ನಡೆಸಿದ್ದರು. ಲಿಂಗಾಯತ ಪ್ರತ್ಯೇಕ ಧರ್ಮ ಸ್ಥಾಪನೆಗೆ ಸ್ವಾಮೀಜಿಗಳೇ ಮನವಿ ನೀಡಿದ್ದರು ಎಂಬ ಸುಳ್ಳು ಹೇಳಿಕೆಯನ್ನು ರಾಜ್ಯದ ಜನ ಮರೆತಿಲ್ಲ. ಬಿಎಸ್ವೈ ಅವರು ಸಿಎಂ ಆಗಿದ್ದ ಸಂದರ್ಭದಲ್ಲಿ ಮಠಮಂದಿರಗಳಿಗೆ ಉದಾರ ನೆರವು ನೀಡಿದ್ದರು.ಅಂದು ವಿಪಕ್ಷ ನಾಯಕರಾಗಿದ್ದ ಸಿದ್ದರಾಮಯ್ಯ ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದರು ಎಂದು ಹೇಳಿದೆ.
ಸಂವಿಧಾನದ ಮುಂದೆ ಎಲ್ಲರೂ ಸಮಾನರು ಎಂದು ವಾದಿಸುವ ಸಿದ್ದರಾಮಯ್ಯನವರಿಗೆ ಹಿಂದುಗಳನ್ನು ವಿರೋಧಿಸಲು ಯಾವ ಕಾನೂನು ಅಡ್ಡಿ ಬರುವುದಿಲ್ಲ! ಹೈಕೋರ್ಟ್ ತೀರ್ಪಿನ ಬಳಿಕ ಹಿಜಾಬ್ ವಿವಾದ ತಣ್ಣಗಾಗಿತ್ತು.ಆದರೆ ಹಿಜಾಬ್ ಧರಿಸಲು ಅವಕಾಶ ನೀಡಿ ಎಂದು ಸಿದ್ದರಾಮಯ್ಯ ಈಗ ಏಕಪಾತ್ರಾಭಿನಯ ಆರಂಭಿಸಿದ್ದಾರೆ. ಕೋಮು ಸೌಹಾರ್ದ ಎಂಬುದು ಈ ದೇಶದಲ್ಲಿ ಕನಸಾಗಿ ಉಳಿದಿರುವುದಕ್ಕೆ ಸಿದ್ದರಾಮಯ್ಯ ಅವರಂಥಹ ಅವಕಾಶವಾದಿ ರಾಜಕಾರಣಿಗಳೇ ಕಾರಣ ಎಂದು ಆಕ್ರೋಶ ವ್ಯಕ್ತಪಡಿಸಿದೆ.