ಬೆಂಗಳೂರು, ಮಾ 26 (DaijiworldNews/DB): ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಏಪ್ರಿಲ್ 1 ರಂದು ಕರ್ನಾಟಕಕ್ಕೆ ಭೇಟಿ ನೀಡುತ್ತಿದ್ದು, ರಾಜಕೀಯ ವಲಯದಲ್ಲಿ ತೀವ್ರ ಸಂಚಲನ ಸೃಷ್ಟಿಯಾಗಿದೆ.
ಅಮಿತ್ ಶಾ ಅವರು ಹಲವು ಮಹತ್ವದ ವಿಚಾರಗಳ ಕುರಿತು ರಾಜ್ಯ ನಾಯಕರೊಂದಿಗೆ ಚರ್ಚೆ ನಡೆಸಲಿದ್ದು, ಇದೇ ವೇಳೆ ಮುಂಬರುವ ವಿಧಾನಸಭಾ ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ.
ಪಂಚ ರಾಜ್ಯಗಳ ಪೈಕಿ ನಾಲ್ಕು ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಿದ ಬಳಿಕ ಬಿಜೆಪಿ ವರಿಷ್ಠರು ಕನಾಟಕ ವಿಧಾನಸಭಾ ಚುನಾವಣೆಯತ್ತ ಕಣ್ಣಿಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಅಮಿತ್ ಶಾ ಅವರ ರಾಜ್ಯ ಭೇಟಿ ಹೆಚ್ಚಿನ ಮಹತ್ವ ಪಡೆಯಲಿದೆ. ಚುನಾವಣೆಗೆ ವರ್ಷವಿದ್ದರೂ ಕರ್ನಾಟಕದಲ್ಲಿ ಮತ್ತೊಮ್ಮೆ ಅಧಿಕಾರ ಪಡೆಯುವ ನಿಟ್ಟಿನಲ್ಲಿ ಈಗಿಂದಲೇ ತಯಾರಿ ನಡೆಸುವ ಉದ್ದೇಶ ಇದೆ ಎಂದು ತಿಳಿದು ಬಂದಿದೆ.
ಶಾ ರಾಜ್ಯ ಭೇಟಿ ವೇಳೆ ಸಿದ್ದಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮಿಗಳ 116ನೇ ಜಯಂತಿಯಲ್ಲಿ ಭಾಗವಹಿಸಲಿದ್ದಾರೆ. ಅರಮನೆ ಮೈದಾನದಲ್ಲಿ ಸಹಕಾರ ಸಚಿವ ಎಸ್. ಟಿ. ಸೋಮಶೇಖರ್ ಹಮ್ಮಿಕೊಂಡಿರುವ ಬೃಹತ್ ಕಾರ್ಯಕ್ರಮದಲ್ಲಿ ಭಾಗವಹಿಸುವ ಸಾಧ್ಯತೆ ಇದೆ.
ವಿಧಾನಸಭಾ ಅಧಿವೇಶನದ ಬಳಿಕ ಸಂಪುಟಪುನಾರಚನೆ ಮಾಡುವ ಬಗ್ಗೆಯೂ ಈ ಹಿಂದೆ ತಿಳಿಸಿದ್ದು, ಸಂಪುಟ ಪುನಾರಚನೆ ಮತ್ತು ನಿಗಮ ಮಂಡಳಿ ನೇಮಕ ಪಟ್ಟಿಗೆ ಒಪ್ಪಿಗೆ ನೀಡುವ ಸಾಧ್ಯತೆಯೂ ಇದೆ.