ಬೆಂಗಳೂರು, ಮಾ 26 (DaijiworldNews/DB): ರಾಜ್ಯದಲ್ಲಿ ಭ್ರಷ್ಟಾಚಾರ ತೊಲಗಿಸುವುದೇ ನಮ್ಮ ಗುರಿ. ಭ್ರಷ್ಟಾಚಾರವನ್ನು ಬುಡ ಸಮೇತ ಕಿತ್ತೊಗೆಯಲು ಗದಾಪ್ರಹಾರ ಆರಂಭಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ವಿಧಾನಸಭೆಯಲ್ಲಿ 2021-22ನೇ ಸಾಲಿನ ಪೂರಕ ಅಂದಾಜುಗಳ ಮೇಲಿನ ಚರ್ಚೆ ವೇಳೆ ಮಾತನಾಡಿದ ಅವರು, ಕೆಲವು ಪ್ರಭಾವಿ ವ್ಯಕ್ತಿಗಳು ಮತ್ತು ಸಂಸ್ಥೆಗಳಲ್ಲಿ ನಡೆಯುತ್ತಿರುವ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ ಇಟ್ಟಿದ್ದೇವೆ. ಇದಲ್ಲದೆ ಅನೇಕ ಪ್ರಕರಣಗಳು ಗೊತ್ತಾಗಿದ್ದು, ಕೆಲವು ಆಶ್ಚರ್ಯಕರ ರೀತಿಯಲ್ಲಿವೆ. ಅಂತಹ ವ್ಯಕ್ತಿ, ಸಂಸ್ಥೆಗಳ ಮೇಲೆ ಗದಾಪ್ರಹಾರ ನಡೆಸಿ ಭ್ರಷ್ಟಾಚಾರವನ್ನು ಮಟ್ಟ ಹಾಕಲು ಸರ್ಕಾರ ಎಲ್ಲಾ ರೀತಿಯ ಪ್ರಯತ್ನ ನಡೆಸುತ್ತಿದೆ ಎಂದರು.
ರಾಜ್ಯದ ಆಸ್ತಿ, ಹಣಕಾಸಿನ ದುರುಪಯೋಗ ತಡೆಯುವುದು ತೀರಾ ಅವಶ್ಯವಾಗಿದೆ. ಈ ಎರಡು ವಿಚಾರಗಳ ರಕ್ಷಣೆಗೆ ಆದ್ಯ ಗಮನ ಹರಿಸಲಾಗುವುದು. ಎಲ್ಲಾ ಪಕ್ಷಗಳು ಒಕ್ಕೊರಲಿನಿಂದ ಸಹಕರಿಸಿದರೆ ಭ್ರಷ್ಟಾಚಾರವನ್ನು ಬುಡ ಸಮೇತ ಕಿತ್ತೊಗೆಯಲು ಸಾಧ್ಯವಿದೆ ಎಂದವರು ಇದೇ ವೇಳೆ ತಿಳಿಸಿದರು.