ಬೆಳಗಾವಿ, ಮಾ 26 (DaijiworldNews/DB): ಮಹಾರಾಷ್ಟ್ರ ಹಾಗೂ ಕರ್ನಾಟಕದ ನಡುವಿನ ಗಡಿ ವಿವಾದದ ಕುರಿತಂತೆ ಮಹಾರಾಷ್ಟ್ರ ವಿಧಾನ ಪರಿಷತ್ನಲ್ಲಿ ಆಡಳಿತಾರೂಢ ಶಿವಸೇನೆ ಸರ್ಕಾರವು ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿರುದ್ಧ ಶುಕ್ರವಾರ ಖಂಡನಾ ನಿರ್ಣಯ ಕೈಗೊಂಡಿದೆ.
ವಿಷಯ ಪ್ರಸ್ತಾಪಿಸಿದ ಶಿವಸೇನೆ ಶಾಸಕ ದಿವಾಕರ್ ರಾವುಟೆ, ಅಕ್ಕಲಕೋಟೆ ಮತ್ತು ಸೊಲ್ಲಾಪುರದಂತಹ ಪ್ರದೇಶಗಳನ್ನು ಮಹಾರಾಷ್ಟ್ರಕ್ಕೆ ನೀಡಲಾಗಿದ್ದು, ಬೆಳಗಾವಿ, ಕಾರವಾರ ಮತ್ತು ನೆರೆಯ ಪ್ರದೇಶಗಳು ಕರ್ನಾಟಕಕ್ಕೆ ಸಲ್ಲುತ್ತವೆ ಎಂದು ಸಿಎಂ ಬೊಮ್ಮಾಯಿ ಹೇಳಿದ್ದಾರೆ. ಆದರೆ ಅವರ ಈ ಹೇಳಿಕೆ ಅಹಿತವಾಗಿದ್ದು, ಅವರ ವಿರುದ್ದ ಖಂಡನಾ ನಿರ್ಣಯ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.
ಸಭಾಪತಿ ರಾಮರಾಜೇ ನಾಯ್ಕ್ ನಿಂಬಾಳ್ಕರ್ ಪ್ರತಿಕ್ರಿಯಿಸಿ, ಬೊಮ್ಮಾಯಿ ಹೇಳಿಕೆ ಖಂಡನೀಯ. ಸದ್ಯ ಮಹಾರಾಷ್ಟ್ರ- ಕರ್ನಾಟಕ ಗಡಿ ವಿವಾದವು ಸುಪ್ರೀಂ ಕೋರ್ಟ್ ನಲ್ಲಿ ವಿಚಾರಣಾ ಹಂತದಲ್ಲಿದೆ. ಇಂತಹ ಸಂದರ್ಭದಲ್ಲಿ ಅವರು ಈ ಹೇಳಿಕೆ ನೀಡಬಾರದಿತ್ತು ಎಂದು ತಿಳಿಸಿದರು. ಬಳಿಕ ಕರ್ನಾಟಕ ಸಿಎಂ ಬಸವರಾಜ ಬೊಮ್ಮಾಯಿ ವಿರುದ್ಧ ಖಂಡನಾ ನಿರ್ಣಯವನ್ನು ಅಂಗೀಕರಿಸಲಾಯಿತು.
1956ರಿಂದಲೇ ಕರ್ನಾಟಕ ಮತ್ತು ಮಹಾರಾಷ್ಟ್ರದ ನಡುವೆ ಗಡಿ ವಿವಾದ ನಡೆಯುತ್ತಿದೆ. ಆಗಾಗ ಈ ಸಂಬಂಧ ವಿವಾದಗಳು ಏರ್ಪಡುತ್ತಲೇ ಇವೆ. ಸದ್ಯ ಈ ಗಡಿ ವಿವಾದವು ಸುಪ್ರೀಂಕೋರ್ಟ್ ನಲ್ಲಿ ವಿಚಾರಣೆ ಹಂತದಲ್ಲಿದೆ.