ಬೆಂಗಳೂರು, ಮಾ 26 (DaijiworldNews/MS): ಹಿಜಾಬ್ ವಿಚಾರವಾಗಿ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಕೊಟ್ಟ "ಸ್ವಾಮೀಜಿಗಳು ತಲೆ ಮೇಲೆ ಬಟ್ಟೆ ಹಾಕೋದಿಲ್ವಾ " ಎಂಬ ಒಂದೇ ಒಂದು ಹೇಳಿಕೆ ರಾಜ್ಯದಲ್ಲಿ ಕೋಲಾಹಲವನ್ನೇ ಸೃಷ್ಟಿಸಿದೆ. ಕಾಂಗ್ರೆಸ್ ಪಕ್ಷಕ್ಕೂ ಹಿರಿಸುಮುರಿಸು ತಂದೊಡ್ಡಿದೆ ಎಂದರೆ ತಪ್ಪಾಗಲಾರದು.
ಹೇಳಿಕೆ ವಿವಾದದ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆಯೇ ಸ್ಪಷ್ಟನೆ ನೀಡಿರುವ ಸಿದ್ದರಾಮಯ್ಯ ಅವರು, ಸ್ವಾಮೀಜಿಗಳಿಗೆ ಅಗೌರವ ತೋರಿಲ್ಲ; ನನ್ನ ಹೇಳಿಕೆ ತಿರುಚಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಸರಣಿ ಟ್ವೀಟ್ ಮಾಡಿರುವ ಅವರು, ನಮ್ಮ ತಾಯಂದಿರು ಸೇರಿದಂತೆ ಸಾಮಾನ್ಯವಾಗಿ ಎಲ್ಲರೂ ತಲೆಮೇಲೆ ಬಟ್ಟೆ ಹಾಕಿಕೊಳ್ಳುತ್ತಾರೆ ಎಂದು ಹೇಳಿದ್ದೆನೆಯೇ ಹೊರತು ಸ್ವಾಮೀಜಿಗಳಿಗೆ ಅವಮಾನ ಮಾಡಿಲ್ಲ, ಅಗೌರವ ತೋರಿಲ್ಲ. ಅನಗತ್ಯವಾಗಿ ನನ್ನ ಹೇಳಿಕೆಯನ್ನು ತಿರುಚಲಾಗಿದೆ.
ಸರ್ವ ಜಾತಿಗಳ ಸ್ವಾಮೀಜಿಗಳ ಬಗ್ಗೆ ನನಗೆ ಗೌರವವಿದೆ, ದೀರ್ಘಕಾಲದಿಂದ ನನಗೆ ಅವರ ಜೊತೆ ಹಾರ್ದಿಕ ಸಂಬಂಧ ಇದೆ. ಯಾವ ಸ್ವಾಮೀಜಿಗಳ ಬಗ್ಗೆಯೂ, ಯಾವಾಗಲೂ ನಾನು ಅಗೌರವದಿಂದ ನಡೆದುಕೊಂಡಿಲ್ಲ ಎನ್ನುವುದು ರಾಜ್ಯದ ಜನತೆಗೆ ಗೊತ್ತಿದೆ. ರಾಜಕೀಯ ವಿರೋಧಿಗಳು ದುರುದ್ದೇಶದಿಂದ ನನ್ನ ಹೇಳಿಕೆಯನ್ನು ತಿರುಚಿ ಅಪಪ್ರಚಾರ ಮಾಡುತ್ತಿದ್ದಾರೆ. ಇದಕ್ಕೆ ಕೆಲವು ಮಾಧ್ಯಮಗಳು ಕೂಡಾ ಸಾಥ್ ನೀಡಿರುವುದು ವಿಷಾದನೀಯ ಬೆಳವಣಿಗೆ.
ನನ್ನ ಹೇಳಿಕೆಯನ್ನು ತಿರುಚಿರುವುದು ರಾಜ್ಯದ ಪ್ರಮುಖ ಮಠಗಳ ಹಿರಿಯ ಸ್ವಾಮೀಜಿಗಳಿಗೆ ಅರ್ಥವಾಗಿರುವ ಕಾರಣಕ್ಕಾಗಿಯೇ ಅವರು ಮೌನವಾಗಿದ್ದಾರೆ. ಅವರೆಲ್ಲರಿಗೂ ನನ್ನ ಕೃತಜ್ಞತಾಪೂರ್ವಕ ನಮನಗಳು” ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.