ಬೆಂಗಳೂರು, ಮಾ 25 (DaijiworldNews/DB): ಬಜೆಟ್ ಮೇಲಿನ ಚರ್ಚೆ ಮುಗಿದ ಬಳಿಕ ಮಾತನಾಡಲು ಅವಕಾಶ ನಿರಾಕರಿಸಿದ್ದಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ನೀವು ನನ್ನ ಮೇಲೆ ಕರುಣೆ ತೋರಿ ಎಂಬುದಾಗಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಲ್ಲಿ ಮನವಿ ಮಾಡಿದ ಪ್ರಸಂಗ ಶುಕ್ರವಾರ ವಿಧಾನಸಭೆಯಲ್ಲಿ ನಡೆಯಿತು.
ಎಲ್ಲರೂ ನಾನು ವಿಧಾನಸಭೆಗೆ ಬರುವುದಿಲ್ಲ ಎಂದು ಹೇಳುತ್ತಾರೆ. ಆದರೆ ಈಗ ಇಲ್ಲೇ ಆಸೀನನಾಗಿದ್ದೇನೆ. ನನಗೆ ಮಾತನಾಡಲು ಅವಕಾಶ ನೀಡಿ ನನ್ನ ಮೇಲೆ ಕರುಣೆ ತೋರಬೇಕು ಎಂದು ಡಿಕೆಶಿ ಹೇಳಿದರು. ಈ ವೇಳೆ ಪ್ರತಿಕ್ರಿಯಿಸಿದ ಸ್ಪೀಕರ್ ಕಾಗೇರಿ, ನೀವು ರಾಜ್ಯ ಸುತ್ತುವವರು, ಮಾಧ್ಯಮಗಳಲ್ಲಿ ನೋಡುತ್ತೇನೆ. ಆದರೆ ಈಗ ಬಜೆಟ್ ಮೇಲಿನ ಚರ್ಚೆ ಮುಗಿದಿರುವುದರಿಂದ ಮಾತನಾಡುವುದಕ್ಕೆ ಅವಕಾಶವಿಲ್ಲ ಎಂದರು.
ಡಿ. ಕೆ. ಶಿವಕುಮಾರ್ ಅವರು ಕಳೆದ ಕೆಲವು ದಿನಗಳಿಂದ ಸದನಕ್ಕೆ ಗೈರು ಹಾಜರಾಗುತ್ತಿದ್ದರು. ಗಂಭೀರ ವಿಚಾರಗಳ ಮೇಲೆ ಚರ್ಚೆ ನಡೆಯುತ್ತಿರುವ ಸಂದರ್ಭದಲ್ಲಿ ಕೆಪಿಸಿಸಿ ಅಧ್ಯಕ್ಷರು ಗೈರಾಗುತ್ತಿದ್ದುದು ಭಾರೀ ಚರ್ಚೆಗೆ ಕಾರಣವಾಗಿತ್ತು.