ಮೈಸೂರು, ಮಾ 25 (DaijiworldNews/MS): ಮುಂಬರುವ 2023ರ ಚುನಾವಣೆಯೇ ನನ್ನ ಕೊನೆಯ ಚುನಾವಣೆ. ಮತ್ತೆ ಚುನಾವಣಾ ರಾಜಕಾರಣ ಮಾಡುವುದಿಲ್ಲ ಎಂದು ಕಾಂಗ್ರೆಸ್ ಹಿರಿಯ ನಾಯಕ, ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಕೊನೆಯ ಚುನಾವಣೆಯಲ್ಲಿ ಎಲ್ಲಿಂದ ಸ್ಪರ್ಧಿಸುತ್ತೀರಿ ಎಂದು ಶುಕ್ರವಾರ ಮೈಸೂರಿನಲ್ಲಿ ಮಾದ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, " ವರುಣಾ, ಹುಣಸೂರು, ಚಾಮರಾಜಪೇಟೆ, ಬಾದಾಮಿ, ಕೋಲಾರ, ಹೆಬ್ಬಾಳ, ಕೊಪ್ಪಳ, ಚಾಮುಂಡೇಶ್ವರಿ.. ಹೀಗೆ ವಿವಿಧೆಡೆ ಸ್ಪರ್ಧೆ ಮಾಡುವಂತೆ ಜನರು ಆಹ್ವಾನ ನೀಡುತ್ತಿದ್ದಾರೆ. ಎಲ್ಲಿಂದ ಸ್ಪರ್ಧಿಸಬೇಕು ಎಂದು ತೀರ್ಮಾನಿಸಿಲ್ಲ. ಚುನಾವಣೆಗೆ ಇನ್ನೂ ಒಂದು ವರ್ಷ ಬಾಕಿ ಇದ್ದು, ಮುಂದೆ ಸೂಕ್ತ ನಿರ್ಧಾರ ಕೈಗೊಳ್ಳುತ್ತೇನೆ" ಎಂದು ಹೇಳಿದ್ದಾರೆ.
"ಎಲ್ಲಿ ನನಗೆ ರಾಜಕೀಯ ಪುನರ್ ಜನ್ಮ ಸಿಕ್ಕಿತೋ ಅಲ್ಲಿಯೇ ನನ್ನನ್ನು ಸೋಲಿಸಿದರು. ಹಾಗೆಂದು ನಾನು ಎಂದಿಗೂ ಬೇಸರ ಮಾಡಿಕೊಳ್ಳಲು ಆಗುವುದಿಲ್ಲ. ಯಾಕೆಂದರೆ ಬರೋಬ್ಬರಿ ಐದು ಬಾರಿ ಚಾಮುಂಡೇಶ್ವರಿ ಜನ ನನ್ನನ್ನು ಗೆಲ್ಲಿಸಿದ್ದಾರೆ. ಅದಕ್ಕಾಗಿ ಚಾಮುಂಡೇಶ್ವರಿಯನ್ನು ನಾನು ಯಾವಾಗಲೂ ಮರೆಯಲ್ಲ . ಆದರೆ ಮುಂದಿನ ಚುನಾವಣೆಯೇ ಕೊನೆ. ಮತ್ತೆ ಚುನಾವಣಾ ರಾಜಕಾರಣ ಮಾಡಲ್ಲ. ಆದರೆ ಸಕ್ರಿಯ ರಾಜಕೀಯದಲ್ಲಿ ಇರುತ್ತೇನೆ" ಎಂದು ಸ್ಪಷ್ಟಪಡಿಸಿದ್ದಾರೆ.