ಕಲ್ಕತ್ತಾ, ಮಾ 25 (DaijiworldNews/DB): ಬಿರ್ಭೂಮ್ ಹಿಂಸಾಚಾರ ಪ್ರಕರಣವನ್ನು ಸ್ವತಂತ್ರ ಸಿಬಿಐ ತನಿಖೆಗೆ ವಹಿಸಿ ಕಲ್ಕತ್ತಾ ಉಚ್ಚ ನ್ಯಾಯಾಲಯವು ಶುಕ್ರವಾರ ಆದೇಶ ಹೊರಡಿಸಿದೆ.
ಪ್ರಕರಣದ ಸ್ವತಂತ್ರ ತನಿಖೆಯನ್ನು ಕೋರಿ ಕೇಂದ್ರ ತನಿಖಾ ಸಂಸ್ಥೆಯು ಪಿಐಎಲ್ ಸಲ್ಲಿಸಿತ್ತು. ಇದರ ವಿಚಾರಣೆ ನಡೆಸಿದ ಕಲ್ಕತ್ತಾ ಉಚ್ಚ ನ್ಯಾಯಾಲಯವು ಈ ಆದೇಶ ನೀಡಿದೆ. ಏಪ್ರಿಲ್ 7 ರೊಳಗೆ ಸಿಬಿಐ ವರದಿ ಸಲ್ಲಿಸಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಪಶ್ಚಿಮ ಬಂಗಾಳದ ಬಿರ್ಭೂಮ್ನಲ್ಲಿ ಟಿಎಂಸಿ ಮುಖಂಡನ ಹತ್ಯೆಗೆ ಪ್ರತೀಕಾರವಾಗಿ ಅವರ ಬೆಂಬಲಿಗರು ವಿರೋಧಿ ಗುಂಪಿನ ಮನೆಗಳಿಗೆ ಬೆಂಕಿ ಹಾಕಿ ಮಹಿಳೆಯರು, ಮಕ್ಕಳು ಸೇರಿ ಎಂಟು ಮಂದಿಯನ್ನು ಥಳಿಸಿ ಸಜೀವದಹನಗೊಳಿಸಿದ್ದರು. ಇದು ಬಂಗಾಳದಲ್ಲಿ ಭಾರೀ ರಾಜಕೀಯ ಕೆಸರೆರಚಾಟಕ್ಕೆ ಕಾರಣವಾಗಿತ್ತಲ್ಲದೆ, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ರಾಜೀನಾಮೆಗೆ ಬಿಜೆಪಿ ಆಗ್ರಹಿಸಿತ್ತು. ಅಲ್ಲದೆ, ಕೇಂದ್ರ ಏಜೆನ್ಸಿಗಳಿಗೆ ತನಿಖೆಯನ್ನು ಹಸ್ತಾಂತರ ಮಾಡಬೇಕೆಂದು ಆಗ್ರಹಿಸಿತ್ತು. ಇದೀಗ ಸಿಬಿಐ ಸುಪರ್ದಿಗೆ ತನಿಖೆಯನ್ನು ವಹಿಸಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಟಿಎಂಸಿಯ ಬ್ಲಾಕ್ ಅಧ್ಯಕ್ಷ ಅನಿರುಲ್ ಹೊಸ್ಸಾಯಿನ್ ಅವರನ್ನು ಪೊಲೀಸರು ಗುರುವಾರ ಬಂಧಿಸಿದ್ದಾರೆ. ಘಟನೆಯಲ್ಲಿ ಈತನ ಕೈವಾಡದ ಬಗ್ಗೆ ಮೃತರ ಕುಟುಂಬಸ್ಥರು ಶಂಕೆ ವ್ಯಕ್ತಪಡಿಸಿದ್ದರು.