ನವದೆಹಲಿ, ಮಾ 25 (DaijiworldNews/DB): ಪಶ್ಚಿಮ ಬಂಗಾಳದ ಬಿರ್ಭೂಮ್ ನಲ್ಲಿ ಎಂಟು ಮಂದಿಯನ್ನು ಥಳಿಸಿ ಸಜೀವದಹನ ಮಾಡಿರುವ ವಿಚಾರವನ್ನು ರಾಜ್ಯಸಭೆಯಲ್ಲಿ ಪ್ರಸ್ತಾಪಿಸುವ ವೇಳೆ ಬಿಜೆಪಿ ಸಂಸದೆ ರೂಪಾ ಗಂಗೂಲಿ ಗದ್ಗದಿತರಾದ ಪ್ರಸಂಗ ಶುಕ್ರವಾರ ನಡೆಯಿತು.
ಸಂಸದೆ ರೂಪಾ ಗಂಗೂಲಿ ವಿಷಯ ಪ್ರಸ್ತಾಪಿಸುತ್ತಾ, ಪಶ್ಚಿಮ ಬಂಗಾಳದಲ್ಲಿ ಸರಣಿ ಕೊಲೆಗಳು ನಡೆಯುತ್ತಿವೆ. ಬಿರ್ಭೂಮ್ ನಲ್ಲಿ ಮಂಗಳವಾರ ನಡೆದ ಘಟನೆಯಲ್ಲಿ ಮಹಿಳೆಯರು ಮತ್ತು ಮಕ್ಕಳು ಸಹಿತ ಎಂಟು ಮಂದಿಯನ್ನು ಥಳಿಸಿ ಸಜೀವದಹನ ಮಾಡಲಾಗಿದೆ. ಅಲ್ಲಿನ ಜನ ಭಯಭೀತರಾಗಿ ವಲಸೆ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ. ವಾಸಕ್ಕೆ ಆ ರಾಜ್ಯ ಯೋಗ್ಯವಿಲ್ಲದಂತಾಗಿದೆ ಎನ್ನುತ್ತಾ ಗದ್ಗದಿತರಾದರು. ಸರ್ಕಾರ ತತ್ ಕ್ಷಣ ಪಶ್ಚಿಮ ಬಂಗಾಳದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಬೇಕು ಎಂದು ಅವರು ಇದೇ ವೇಳೆ ಒತ್ತಾಯಿಸಿದರು.
ಬಳಿಕ ಸಂಸತ್ತಿನ ಹೊರಗಡೆ ಮಾಧ್ಯಮದವರೊಂದಿಗೆ ಮಾತನಾಡಿದ ರೂಪಾ ಗಂಗೂಲಿ, ಬಿರ್ಭೂಮ್ ಪ್ರಕರಣದಲ್ಲಿ ಪಶ್ಚಿಮ ಬಂಗಾಳ ರಾಜ್ಯ ಸರ್ಕಾರವು ಆರೋಪಿಗಳನ್ನು ರಕ್ಷಿಸಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದರು.
ಅಲ್ಲಿ ಜನರು ಮಾತನಾಡುವ ಹಾಗಿಲ್ಲ. ಸರ್ಕಾರ ಕೊಲೆಗಡುಕರನ್ನು ರಕ್ಷಣೆ ಮಾಡುತ್ತಿದೆ. ಚುನಾವಣೆಯಲ್ಲಿ ಗೆದ್ದ ಬಳಿಕ ಜನರನ್ನು ಕೊಲೆ ಮಾಡುವ ಸರ್ಕಾರ ಬೇರೆ ಯಾವುದೇ ರಾಜ್ಯದಲ್ಲಿ ಇಲ್ಲ. ನಾವು ಮನುಷ್ಯರು. ಕಲ್ಲೆಸೆದು ರಾಜಕಾರಣ ಮಾಡುವ ನೀಚತನ ಇರಬಾರದು ಎಂದವರು ಇದೇ ವೇಳೆ ತಿಳಿಸಿದರು.