ನವದೆಹಲಿ, ಮಾ 25 (DaijiworldNews/DB): ಗಲ್ವಾನ್ ಘರ್ಷಣೆ ನಂತರ ಇದೇ ಮೊದಲ ಬಾರಿಗೆ ಚೀನಾ ವಿದೇಶಾಂಗ ಸಚಿವ ವಾಂಗ್ ಯಿ ಭಾರತ ಪ್ರವಾಸ ಕೈಗೊಂಡಿದ್ದು, ರಾಷ್ಟ್ರ ರಾಜಧಾನಿಯ ಹೈದರಾಬಾದ್ ಹೌಸ್ ನಲ್ಲಿ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಅವರನ್ನು ಶುಕ್ರವಾರ ಭೇಟಿಯಾಗಿದ್ದಾರೆ.
ಜೂನ್ 2020ರಲ್ಲಿ ಗಲ್ವಾನ್ ಘರ್ಷಣೆ ನಡೆದಿತ್ತು. ಆನಂತರ ಚೀನಾ ವಿದೇಶಾಂಗ ಸಚಿವರು ಭಾರತಕ್ಕೆ ಬಂದಿರಲಿಲ್ಲ. ಸುಮಾರು ಎರಡು ವರ್ಷಗಳ ಬಳಿಕ ತಮ್ಮ ನಿಯೋಗದೊಂದಿಗೆ ಮಹತ್ವದ ಮಾತುಕತೆಗಾಗಿ ಭಾರತಕ್ಕೆ ಬಂದಿದ್ದಾರೆ. ಉಭಯ ರಾಷ್ಟ್ರಗಳ ನಡುವಿನ ಸಂಪರ್ಕ ಪುನರಾರಂಭ ಮತ್ತು ಬೀಜಿಂಗ್ ನಲ್ಲಿ ವರ್ಷಾಂತ್ಯ ನಡೆಯಲಿರುವ ಬ್ರಿಕ್ಸ್ ಸಭೆಗೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಆಹ್ವಾನಿಸುವುದು ವಾಂಗ್ ಯೀ ಅವರ ಭೇಟಿಯ ಮುಖ್ಯ ಉದ್ದೇಶವಾಗಿದೆ ಎನ್ನಲಾಗಿದೆ.
ಜೈ ಶಂಕರ್ ಭೇಟಿಗೂ ಮುನ್ನ ಸೌತ್ ಬ್ಲಾಕ್ ನಲ್ಲಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರನ್ನು ಚೀನಾ ಸಚಿವರು ಭೇಟಿಯಾಗಿ ಮಾತುಕತೆ ನಡೆಸಿದರು.
ಇತ್ತೀಚೆಗೆ ಇಸ್ಲಮಾಬಾದ್ ನಲ್ಲಿ ಇಸ್ಲಾಮಿಕ್ ಸಹಕಾರ ಸಭೆಯಲ್ಲಿ ಪಾಲ್ಗೊಂಡಿದ್ದ ಚೀನಾ ವಿದೇಶಾಂಗ ಸಚಿವರು, ಕಾಶ್ಮೀರದ ಬಗ್ಗೆ ಇಸ್ಲಾಮಿಕ ಸ್ನೇಹಿತರ ಮಾತುಗಳನ್ನು ನಾವು ಮತ್ತೊಮ್ಮೆ ಕೇಳಿದ್ದೇವೆ. ಚೀನಾದ ಆಕಾಂಕ್ಷೆಯೂ ಅದೇ ಆಗಿದೆ ಎಂದು ವಿವಾದಾತ್ಮಕವಾಗಿ ಮಾತನಾಡಿ ಭಾರತದ ಕೋಪಕ್ಕೆ ಕಾರಣವಾಗಿದ್ದರು.