ಜಾರ್ಖಂಡ್ , ಮಾ 25 (DaijiworldNews/MS): ಗಂಗಾನದಿಯಲ್ಲಿ ಸರಕು ಸಾಗಣೆ ಹಡಗಿನಲ್ಲಿ ಸಾಗಿಸುತ್ತಿದ್ದ 12 ಟ್ರಕ್ಗಳು ನದಿಯಲ್ಲಿ ಮುಳುಗಿದ್ದರಿಂದ ಹತ್ತಕ್ಕೂ ಹೆಚ್ಚು ಜನರು ಗಂಗಾ ನದಿಯಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ನಡೆದಿದೆ.
ಜಾರ್ಖಂಡ್ನ ಸಾಹೇಬ್ಗಂಜ್ ಮತ್ತು ಬಿಹಾರದ ಕತಿಹಾರ್ ಜಿಲ್ಲೆಯ ಮಣಿಹಾರಿ ನಡುವೆ ಸಾಗುತ್ತಿದ್ದ ಕಾರ್ಗೋ ಸರಕು ಹಡಗು ಮುಳುಗಿದ ಘಟನೆ ಗುರುವಾರ ರಾತ್ರಿ ಸುಮಾರು 12 ರಿಂದ 1 ಗಂಟೆಯ ನಡುವೆ ಸಂಭವಿಸಿದೆ ಎಂದು ಹೇಳಲಾಗುತ್ತಿದೆ.
ಸೂರ್ಯಾಸ್ತದ ಬಳಿಕವೂ ನಿಯಮದ ವಿರುದ್ಧವಾಗಿ ಜಾರ್ಖಂಡ್ನ ಸಾಹೇಬ್ಗಂಜ್ನಿಂದ ಬಿಹಾರದ ಮಣಿಹಾರಿಗೆ ಹಡಗನ್ನು ಪ್ರಯಾಣಿಸುತ್ತಿತ್ತು. ರಾತ್ರಿ ವೇಳೆ ಸರಕು ಸಾಗಣೆ ಹಡಗು ನಡೆಸುವುದು ಕಾನೂನು ಬಾಹಿರವಾಗಿದೆ. ಘಟನೆಯ ನಂತರ ಹತ್ತು ಮಂದಿ ನಾಪತ್ತೆಯಾಗಿದ್ದಾರೆ ಎಂದು ದುರಂತದ ಹತ್ತಿರದ ಸ್ಥಳವಾದ ಮುಕ್ತೇಶ್ವರ ಗಂಗಾ ಘಾಟ್ಗೆ ಭೇಟಿ ನೀಡಿದ ಜಿಲ್ಲಾಧಿಕಾರಿ ರಾಮ್ ನಿವಾಸ್ ಯಾದವ್ ಮಾಹಿತಿ ನೀಡಿದ್ದಾರೆ
ಹಡಗಿನಲ್ಲಿ ಲೋಡ್ ಮಾಡಿದ 18 ಟ್ರಕ್ಗಳಿದ್ದು, ಒಂದು ಟ್ರಕ್ನ ಟೈರ್ ಒಡೆದು ವಾಲಿಕೊಂಡು ನದಿಯಲ್ಲಿ ಮುಳುಗಿತು. ಸ್ಟೀಮರ್ ಅಸಮತೋಲನಗೊಂಡಿದ್ದರಿಂದ, ಹೆಚ್ಚಿನ ಟ್ರಕ್ಗಳು ನದಿಯಲ್ಲಿ ಮುಳುಗಡೆಯಾಯಿತು ಎಂದು ಹಡಗಿನ ಕ್ಯಾಪ್ಟನ್ ಅಮರ್ ಚೌಧರಿ ಘಟನೆ ಕುರಿತು ವಿವರಿಸಿದ್ದಾರೆ.
ಮುಫಾಸಿಲ್ ಪೊಲೀಸ್ ಠಾಣೆ ಪೊಲೀಸರು ಘಟನಾ ಸ್ಥಳಕ್ಕೆ ಆಗಮಿಸಿದ್ದು, ತನಿಖೆ ಆರಂಭಿಸಿದ್ದಾರೆ. ರಕ್ಷಣಾ ಕಾರ್ಯ ಮುಂದುವರಿಸಿದೆ.