ನಾಗ್ಪುರ, ಮಾ 25 (DaijiworldNews/DB): ಮೊಬೈಲ್ ಫೋನ್ ಒಡೆದು ಹಾಕಿದನೆಂದು ರೊಚ್ಚಿಗೆದ್ದ ಯುವಕನೋರ್ವ ಕೂಲಿ ಕಾರ್ಮಿಕನನ್ನು ಹತ್ಯೆ ಮಾಡಿದ ಆತಂಕಕಾರಿ ಘಟನೆ ಮಹಾರಾಷ್ಟ್ರದ ನಾಗ್ಪುರ ನಗರದಲ್ಲಿ ನಡೆದಿದೆ.
ಹತ್ಯೆಯಾದವನನ್ನು ಸಾಲಿರಾಮ್ ಅಲಿಯಾಸ್ ರಿಂಕು ಕುಮಾರ್ (31 ವರ್ಷ) ಎಂದು ಗುರುತಿಸಲಾಗಿದೆ. ಬುಧವಾರ ರಾತ್ರಿ ಘಟನೆ ನಡೆದಿದ್ದು, ಘಟನೆಗೆ ಸಂಬಂಧಿಸಿ ಹತ್ಯೆಗೈದ ಯುವಕನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೃತ ಸಾಲಿರಾಮ್ ಮತ್ತು ಆರೋಪಿ ಮೂಲತಃ ಉತ್ತರ ಪ್ರದೇಶದ ಸಿದ್ಧಾರ್ಥ್ ನಗರ ಜಿಲ್ಲೆಯವರಾಗಿದ್ದು, ನಾಗ್ಪುರ ನಗರದಲ್ಲಿ ವಾಸವಾಗಿದ್ದರು ಎನ್ನಲಾಗಿದೆ. ಸಾಲಿರಾಮ್ ಕೂಲಿ ಕಾರ್ಮಿಕನಾಗಿದ್ದು, ನಾಗ್ಪುರದಲ್ಲಿ ಕೆಲಸ ಮಾಡುತ್ತಿದ್ದ.
ಬುಧವಾರ ರಾತ್ರಿ ತನ್ನ ಊರಿನಲ್ಲಿರುವ ಸಂಬಂಧಿಕರೊಂದಿಗೆ ಮಾತನಾಡಲು ಯುವಕನೊಂದಿಗೆ ಆತ ಮೊಬೈಲ್ ಕೇಳಿದ್ದಾನೆ. ಆದರೆ, ಮೊಬೈಲ್ ಕೊಡಲು ಯುವಕ ನಿರಾಕರಿಸಿದ ಕಾರಣ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ. ಬಳಿಕ ಆತ ಸಾಲಿರಾಮ್ ಗೆ ಮೊಬೈಲ್ ನೀಡಿದ್ದರಿಂದ ಆತ ತನ್ನ ಸಂಬಂಧಿಕರೊಂದಿಗೆ ಮಾತನಾಡಿ, ಮಾತು ಮುಗಿದ ಮೇಲೆ ಮೊಬೈಲ್ ನ್ನು ನೆಲಕ್ಕೆ ಬಡಿದು ಪುಡಿ ಮಾಡಿದ್ದಾನೆ. ಇದರಿಂದ ರೊಚ್ಚಿಗೆದ್ದ ಯುವಕ ಸಾಲಿರಾಮ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ. ಹಲ್ಲೆಯಿಂದಾಗಿ ಗಂಭೀರ ಗಾಯಗೊಂಡಿದ್ದ ಸಾಲಿರಾಮ್ ಬಳಿಕ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.