ನವದೆಹಲಿ, ಮಾ 25 (DaijiworldNews/MS): ದೇಶದಲ್ಲಿ 1,515 ಭಾರತೀಯ ಆಡಳಿತ ಸೇವೆ (ಐಎಎಸ್) ಅಧಿಕಾರಿಗಳ ಕೊರತೆ ಇದೆ ಎಂದು ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಬುಧವಾರ ಸಂಸತ್ತಿಗೆ ತಿಳಿಸಿದರು.
ದೇಶಾದ್ಯಂತ ಐಎಎಸ್ ಅಧಿಕಾರಿಗಳಿಗೆ 6,746 ಹುದ್ದೆಗಳಿವೆ. ಪ್ರಸ್ತುತ ಜಮ್ಮು ಮತ್ತು ಕಾಶ್ಮೀರದಲ್ಲಿ 59 ಐಎಎಸ್ ಅಧಿಕಾರಿಗಳಿದ್ದು, ಅಲ್ಲಿ 137 ಅಧಿಕಾರಿಗಳ ಅವಶ್ಯಕತೆ ಇದೆ. ಅವಶ್ಯವಿರುವ ಒಟ್ಟು ಅಧಿಕಾರಿಗಳ ಸಂಖ್ಯೆಯಲ್ಲಿ ತಮಿಳುನಾಡಿನಲ್ಲಿ ಅತಿ ಹೆಚ್ಚು ಸಂಖ್ಯೆಯ ಐಎಎಸ್ ಅಧಿಕಾರಿಗಳಿದ್ದು (ಶೇಕಡ 85), ಉತ್ತರ ಪ್ರದೇಶ, ಹರಿಯಾಣ ಹಾಗೂ ಮಧ್ಯ ಪ್ರದೇಶದಲ್ಲಿ ತಲಾ ಶೇಕಡ 84ರಷ್ಟು ಅಧಿಕಾರಿಗಳಿದ್ದಾರೆ.
ಐಎಎಸ್ ಅಧಿಕಾರಿಗಳ ನೇಮಕಾತಿ ಹೆಚ್ಚಿಸುವ ಕೇಂದ್ರದ ಉದ್ದೇಶವನ್ನು ವಿವರಿಸಿದ ಅವರು, ನಾಗರಿಕ ಸೇವಾ ಪರೀಕ್ಷೆಗಳ ಮೂಲಕ ವಾರ್ಷಿಕ ನೇಮಕ ಮಾಡುವ ಐಎಎಸ್ ಅಧಿಕಾರಿಗಳ ಸಂಖ್ಯೆಯನ್ನು 180ಕ್ಕೆ ಹೆಚ್ಚಿಸಲಾಗಿದೆ. 2020ರಿಂದ ಐಪಿಎಸ್ ಅಧಿಕಾರಿಗಳ ನೇಮಕಾತಿ ಪ್ರಮಾಣವನ್ನು 150ರಿಂದ 200ಕ್ಕೆ ಹೆಚ್ಚಿಸಲಾಗಿದೆ ಎಂದು ಹೇಳಿದರು.
ಡೆಪ್ಯುಟೇಶನ್ಗೆ ಲಭ್ಯವಿರುವ ಐಎಎಸ್ ಅಧಿಕಾರಿಗಳ ಸಂಖ್ಯೆ 2011 ರಲ್ಲಿ 309 ರಿಂದ ಜನವರಿ 2022 ರ ಹೊತ್ತಿಗೆ 223 ಕ್ಕೆ ಇಳಿದಿದೆ ಎಂದು ಹೇಳಿದರು.