ಶ್ರೀನಗರ, ಮಾ 24 (DaijiworldNews/DB): ದಿ ಕಾಶ್ಮೀರ್ ಫೈಲ್ಸ್ ಚಿತ್ರವು ಸಮುದಾಯಗಳ ನಡುವೆ ಅಂತರ ಸೃಷ್ಟಿಸುವ ಉದ್ದೇಶವನ್ನು ಹೊಂದಿದೆ. ದ್ವೇಷ, ಹಿಂಸಾಚಾರ ಹುಟ್ಟುಹಾಕುವ ಉದ್ದೇಶವೂ ಈ ಚಿತ್ರದ ಹಿಂದಿದೆ ಎಂದು ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್ವಾದಿ) ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚೂರಿ ಆರೋಪಿಸಿದ್ದಾರೆ.
ಮಾಧ್ಯಮಗಳನ್ನುದ್ದೇಶಿಸಿ ಗುರುವಾರ ಮಾತನಾಡಿದ ಅವರು, ಇಂತಹ ಚಿತ್ರಗಳು ದೇಶವನ್ನು ತೊಂದರೆಗೆ ಸಿಲುಕಿಸುತ್ತವೆ. ಎರಡು ಸಮುದಾಯಗಳ ಮಧ್ಯೆ ಅಂತರ ಸೃಷ್ಟಿಸಲು ಈ ಚಿತ್ರ ಕಾರಣವಾಗುತ್ತದೆ ಎಂದರು.
ಕಾಶ್ಮೀರ್ ಫೈಲ್ಸ್ ಚಿತ್ರವನ್ನು ಎಲ್ಲರೂ ನೋಡಬೇಕೆಂದು ಪ್ರಧಾನಿ ಹೇಳುತ್ತಾರೆ. ಆದರೆ ಗೋಧ್ರಾ ಹಕ್ಕುಗಳ ಚಲನಚಿತ್ರವಾದ ಪರ್ಜಾನಿಯಾವನ್ನು ವೀಕ್ಷಿಸಲು ಅವರು ಜನರಿಗೆ ಅಂತಹ ಕರೆ ಕೊಟ್ಟಿಲ್ಲ. ಆಗಿನ ರಾಜ್ಯಪಾಲರ ಪಾತ್ರವನ್ನೂ ಕಾಶ್ಮೀರಿ ಪಂಡಿತರ ವಲಸೆ ನಿಟ್ಟಿನಲ್ಲಿ ತನಿಖೆಗೊಳಪಡಿಸುವ ಅಗತ್ಯವಿದೆ ಎಂದು ಅವರು ತಿಳಿಸಿದರು.
ಅಂದು ಕಾಶ್ಮೀರದಲ್ಲಿ ನಡೆದ ಹಿಂಸಾಚಾರದಲ್ಲಿ ಕೇವಲ ಕಾಶ್ಮೀರಿ ಪಂಡಿತರು ಮಾತ್ರ ಸಾವನ್ನಪ್ಪಿಲ್ಲ. ಸಿಖ್ಖರು ಮತ್ತು ಮುಸ್ಲಿಮರೂ ಜೀವ ಕಳೆದುಕೊಂಡಿದ್ದಾರೆ. ದ್ವೇಷದ ರಾಜಕಾರಣ ದೇಶದ ಮೇಲೆ ಪರಿಣಾಮ ಬೀರುತ್ತದೆ ಎಂಬುದನ್ನು ಬಿಜೆಪಿಯವರು ಅರ್ಥ ಮಾಡಿಕೊಳ್ಳಬೇಕು. ಸಂವಿಧಾನ ಉಳಿಯಬೇಕಾದರೆ ಎಡಪಂಥೀಯ ಶಕ್ತಿಗಳು ಬಲಗೊಳ್ಳಬೇಕು ಎಂದರು.