ಬೆಂಗಳೂರು, ಮಾ 24 (DaijiworldNews/DB): ಶಾಲೆ-ಕಾಲೇಜಿನಲ್ಲಿ ಸಮವಸ್ತ್ರದೊಂದಿಗೆ ಅದೇ ಬಣ್ಣದ ದುಪಟ್ಟಾ ಧರಿಸಲು ಮುಸ್ಲಿಂ ವಿದ್ಯಾರ್ಥಿನಿಯರಿಗೆ ಅವಕಾಶ ನೀಡಬೇಕು ಎಂದು ವಿಪಕ್ಷ ನಾಯಕ ಸಿದ್ಧರಾಮಯ್ಯ ಸರಕಾರಕ್ಕೆ ಮನವಿ ಮಾಡಿದ್ದಾರೆ.
ಹಿಜಾಬ್ ವಿಚಾರ ಸುಪ್ರೀಂಕೋರ್ಟ್ನಲ್ಲಿ ಇರುವುದರಿಂದ ಅದರ ಬಗ್ಗೆ ನಾನು ಮಾತನಾಡುವುದಿಲ್ಲ. ಆದರೆ ಶಾಲಾ ಸಮವಸ್ತ್ರದೊಂದಿಗೆ ಅದೇ ಬಣ್ಣದ ದುಪಟ್ಟಾ ಧರಿಸುವುದು ಹಿಜಾಬ್ ಆಗುವುದಿಲ್ಲ. ಸಮವಸ್ತ್ರದ ಬಣ್ಣದ ದುಪಟ್ಟಾ ಧರಿಸಲು ಅನುಮತಿ ನೀಡಲು ಅವಕಾಶ ಕೊಡಿಸಬೇಕು ಎಂದು ಕೋರಿ ಕೆಲವು ಮುಸ್ಲಿಂ ಧರ್ಮಗುರುಗಳು ಬುಧವಾರ ನಮ್ಮನ್ನು ಭೇಟಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಸರಕಾರ ಯೋಚಿಸಿ ಅವರಿಗೆ ಅವಕಾಶ ಕಲ್ಪಿಸಬೇಕು ಎಂದವರು ವಿಧಾನಸಭೆಯಲ್ಲಿ ಒತ್ತಾಯಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್, ಶಿಕ್ಷಣ ಪಡೆಯುವುದು ಪ್ರತಿಯೊಬ್ಬರ ಹಕ್ಕು. ಶಿಕ್ಷಣದಿಂದ ವಂಚಿತರಾಗಬೇಡಿ ಎಂಬುದಾಗಿ ಆ ಆರು ಮಂದಿ ಹೆಣ್ಣು ಮಕ್ಕಳಿಗೆ ಸಾಕಷ್ಟು ಸಲಹೆ ನೀಡಲಾಗಿದೆ. ಆದರೆ ಅವರು ಯಾರ ಮಾತನ್ನೂ ಕೇಳಿಲ್ಲ. ನೀವೇ ಅವರನ್ನು ಮನವೊಲಿಸಿ ಶಿಕ್ಷಣದ ಮಹತ್ವವನ್ನು ಅರ್ಥ ಮಾಡಿಸಬೇಕು ಎಂದರು.