ನವದೆಹಲಿ, ಮಾ 24 (DaijiworldNews/DB): ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಇಂಧನ ಬೆಲೆ ಏರಿಕೆಯಾಗಿರುವುದೇ ದೇಶದಲ್ಲಿಯೂ ದರ ಏರಿಕೆಗೆ ಕಾರಣ ಎಂದು ಕೇಂದ್ರ ಪೆಟ್ರೋಲಿಯಂ ಸಚಿವ ಹರ್ದೀಪ್ ಸಿಂಗ್ ಪುರಿ ಅವರು ದರ ಏರಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.
ಪೆಟ್ರೋಲ್ ದರ ಏರಿಕೆ ಕುರಿತು ಲೋಕಸಭೆಯಲ್ಲಿ ಗುರುವಾರ ನಡೆದ ಚರ್ಚೆ ವೇಳೆ ಮಾತನಾಡಿದ ಅವರು, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೆಲೆ ಏರಿಕೆಯಾಗಿದೆ. ಏಪ್ರಿಲ್ 2021ರಿಂದ ಫೆಬ್ರವರಿ 2022ರವರೆಗಿನ ಮಾರುಕಟ್ಟೆ ಸ್ಥಿತಿಗತಿಗಳನ್ನು ನೋಡಿದಾಗ ಎಲ್ಎನ್ಜಿ ಬೆಲೆಗಳು ಶೇ. 37 ಕ್ಕಿಂತ ಹೆಚ್ಚಾಗಿದೆ. ಅನಿವಾರ್ಯವಾಗಿ ದೇಶದಲ್ಲಿಯೂ ಬೆಲೆ ಏರಿಕೆ ಮಾಡಲಾಗಿದೆ ಎಂದರು.
ದರ ಏರಿಕೆಯ ನಡುವೆಯೂ ಜನರಿಗೆ ಕೈಗೆಟಕುವ ದರದಲ್ಲಿ ಇಂಧನ ಲಭಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಪ್ರಯತ್ನ ನಡೆಸುತ್ತಿದೆ ಎಂದವರು ಇದೇ ವೇಳೆ ತಿಳಿಸಿದರು.