ಬೆಂಗಳೂರು, ಮಾ 24 (DaijiworldNews/DB): ಹಿಂದೂ-ಮುಸ್ಲಿಮರ ನಡುವೆ ಜಗಳ ಹುಟ್ಟು ಹಾಕುವುದು, ಧರ್ಮಗಳ ನಡುವೆ ಬಿರುಕು ಮೂಡಿಸುವುದೇ ಬಿಜೆಪಿಯ ಕೆಲಸ. ರಾಜ್ಯದಲ್ಲಿ ಶಾಂತಿ ಕದಡುವ ಕೆಲಸ ನಿರಂತರವಾಗಿ ನಡೆಯುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಆರೋಪಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಗುರುವಾರ ಮಾತನಾಡಿದ ಅವರು, ಕೋವಿಡ್ ಸೋಂಕಿತರಿಗೆ ಆಕ್ಸಿಜನ್ ಒದಗಿಸುವುದು, ಹಣದುಬ್ಬರ ನಿಯಂತ್ರಣ, ಉದ್ಯೋಗ ಸೃಷ್ಟಿ ಯಾವುದೂ ಅವರಿಂದ ಸಾಧ್ಯವಾಗಿಲ್ಲ. ಆದರೆ ಧರ್ಮಗಳ ನಡುವೆ ಬಿರುಕು ಮೂಡಿಸುವುದು ಸಾಧ್ಯವಾಗುತ್ತದೆ. ಹಿಜಾಬ್ ಕಿಚ್ಚು ತಣ್ಣಗಾಗಿದೆ ಎನ್ನುವಷ್ಟರಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ಆರ್ಥಿಕ ಬಹಿಷ್ಕಾರ ಹಾಕಿ ರಾಜ್ಯಾದ್ಯಂತ ಸುದ್ದಿಯಾಗುವಂತೆ ಮಾಡಿದೆ. ಎರಡೂ ಧರ್ಮಗಳ ನಡುವೆ ಜಗಳ ತಂದಿಡುವುದೇ ಅವರ ಕೆಲಸವಾಗಿದೆ ಎಂದು ಆಪಾದಿಸಿದರು.
ಈ ಆರ್ಥಿಕ ಬಹಿಷ್ಕಾರ ವಿಚಾರವು ಕರಾವಳಿಯಿಂದ ಬೆಂಗಳೂರಿನವರೆಗೂ ಹಬ್ಬಿದೆ. ಇಲ್ಲಿಯೂ ಹಿಂದೂ ಸಂಘಟನೆಗಳು ಬಹಿಷ್ಕಾರ ಚಳವಳಿ ಆರಂಭಿಸಿದ್ದಾರೆ. ಇಂತಹ ಬೆಳವಣಿಗೆಗಳು ರಾಜ್ಯದಲ್ಲಿ ನಡೆಯುತ್ತಿರುವುದು ಆತಂಕಕಾರಿಯಾಗಿದೆ ಎಂದು ಅವರು ವಿಷಾದ ವ್ಯಕ್ತಪಡಿಸಿದರು.