ಹುಣಸೂರು, ಮಾ 24 (DaijiworldNews/DB): ಮೃತ ಅಣ್ಣನ ಹೆಸರಿನಲ್ಲಿ ತಮ್ಮ ಕಳೆದ 24 ವರ್ಷಗಳಿಂದ ಶಿಕ್ಷಕ ವೃತ್ತಿ ನಿರ್ವಹಿಸುತ್ತಿದ್ದ ಪ್ರಕರಣ ತಡವಾಗಿ ಬೆಳಕಿಗೆ ಬಂದಿದ್ದು, ಸದ್ಯ ಆತನಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಹುಣಸೂರು ತಾಲೂಕಿನ ಕಟ್ಟೆಮಳಲವಾಡಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಲೋಕೇಶ್ ಗೌಡ ಎನ್ನುವವರು ಸಹ ಶಿಕ್ಷಕನಾಗಿ ನೇಮಕಗೊಂಡಿದ್ದರು. ಆದರೆ ಕೆಲಸಕ್ಕೆ ಹಾಜರಾಗುವ ಮುನ್ನ ಅವರು ಅಕಾಲಿಕ ಮರಣವನ್ನಪ್ಪಿದ್ದರು. ಆದರೆ ಅವರ ಕಿರಿಯ ಸಹೋದರ ಲಕ್ಷ್ಮಣೇ ಗೌಡ ಎಂಬುವವನು ತಾನೇ ಲೋಕೇಶ್ ಎಂದು ಹೇಳಿಕೊಂಡು ಶಿಕ್ಷಣ ಇಲಾಖೆ ಕಣ್ಣಿಗೆ ಮಣ್ಣೆರಚಿ ಸುಮಾರು ಎರಡೂವರೆ ದಶಕಗಳಿಂದ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ.
ಮೊದಲು ಪಿರಿಯಾಪಟ್ಟಣದ ಮುದ್ದನಹಳ್ಳಿ ಗ್ರಾಮದ ಶಾಲೆಯಲ್ಲಿ ಕೆಲಸ ಆರಂಭಿಸಿದ್ದ ಆತ ಬಳಿಕ ಜಿಲ್ಲೆಯ ವಿವಿಧ ಶಾಲೆಗಳಲ್ಲಿ ಕಾರ್ಯ ನಿರ್ವಹಿಸಿದ್ದ. ಆದರೆ ಈತ ಲೋಕೇಶ್ ಅಲ್ಲ ಎಂಬ ಸಣ್ಣ ಅನುಮಾನವೂ ಇಲಾಖೆಗೆ ಬಂದಿರಲಿಲ್ಲ. 2019ರಲ್ಲಿ ಹುಣಸೂರಿನ ಪತ್ರಕರ್ತ ಇಂಟೆಕ್ ರಾಜು ಅವರಿಗೆ ಲೋಕೇಶ್ ಹೆಸರಲ್ಲಿ ಲಕ್ಷ್ಮಣೇ ಗೌಡ ಕರ್ತವ್ಯ ನಿರ್ವಹಿಸುತ್ತಿರುವ ಸುಳಿವು ಲಭಿಸಿದ ಹಿನ್ನೆಲೆಯಲ್ಲಿ ಈ ಕುರಿತು ವಿಚಾರಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಬಳಿಕ ಅವರು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರಿಗೆ ದೂರು ನೀಡಿದರು.
ಆರೋಪಿಯು ಸೂಕ್ತ ದಾಖಲೆಗಳನ್ನು ನೀಡಲು ವಿಫಲನಾದ ಹಿನ್ನೆಲೆಯಲ್ಲಿ ಆತನ ವಿರುದ್ಧ ಮಾ.21ರಂದು ಪಿರಿಯಾಪಟ್ಟಣದ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಯಿತು. ಬಳಿಕ ಆತನನ್ನು ಪೊಲೀಸರು ಬಂಧಿಸಿ ಇದೀಗ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.