ಕೋಲ್ಕತಾ, ಮಾ 24 (DaijiworldNews/DB): ಪಶ್ಚಿಮ ಬಂಗಾಳದ ಬಿರ್ಭೂಮ್ನಲ್ಲಿ ಟಿಎಂಸಿ ಮುಖಂಡನ ಹತ್ಯೆಗೆ ಪ್ರತೀಕಾರವಾಗಿ ಎಂಟು ಮಂದಿಯನ್ನು ಥಳಿಸಿ ಬಳಿಕ ಸಜೀವದಹನ ಮಾಡಿರುವುದು ಶವ ಪರೀಕ್ಷೆ ವರದಿಯಲ್ಲಿ ಬಹಿರಂಗವಾಗಿದೆ.
ಬಿರ್ಭೂಮ್ ಜಿಲ್ಲೆಯ ಬೊಗ್ಟುಯಿ ಗ್ರಾಮದಲ್ಲಿ ಮಾರ್ಚ್ 21 ರಂದು ಸಂಜೆ ಸ್ಥಳೀಯ ಟಿಎಂಸಿ ನಾಯಕನ ಹತ್ಯೆಯಾಗಿತ್ತು. ಬಳಿಕ ಇಲ್ಲಿ ಬಿಗು ವಾತಾವಾರಣ ನಿರ್ಮಾಣವಾಗಿತ್ತು. ಮುಖಂಡ ಮೃತಪಟ್ಟಿರುವ ಸುದ್ದಿ ತಿಳಿದು ರೊಚ್ಚಿಗೆದ್ದ ಅವರ ಬೆಂಬಲಿಗರ ಗುಂಪೊಂದು ಆ ಗ್ರಾಮದಲ್ಲಿರುವ ವಿರೋಧಿ ಗುಂಪಿನ ಕೆಲವರ ಮನೆಗಳ ಮೇಲೆ ದಾಳಿ ನಡೆಸಿ ಮನೆಗಳಿಗೆ ಬೆಂಕಿ ಹಚ್ಚಿದ್ದರು. ಇದರಲ್ಲಿ ಮೂವರು ಮಹಿಳೆಯರು ಮತ್ತು ಇಬ್ಬರು ಮಕ್ಕಳು ಸೇರಿದಂತೆ ಎಂಟು ಮಂದಿ ಸಜೀವದಹನವಾಗಿದ್ದರು. ಇದೀಗ ಎಂಟು ಮಂದಿಯ ಶವ ಪರೀಕ್ಷೆ ನಡೆಸಿದ ವೇಳೆ ಅವರನ್ನು ಸಜೀವದಹನ ಮಾಡುವ ಮುನ್ನ ಮನಬಂದಂತೆ ದುಷ್ಕರ್ಮಿಗಳು ಥಳಿಸಿರುವುದು ಗೊತ್ತಾಗಿದೆ. ಘಟನೆಯಲ್ಲಿ ಸುಮಾರು 12 ಮನೆಗಳು ಸುಟ್ಟು ಕರಕಲಾಗಿದ್ದವು.
ತಪ್ಪಿತಸ್ಥರು ಟಿಎಂಸಿ ಪಕ್ಷದವರೇ ಆದರೂ ಮುಲಾಜಿಲ್ಲದೆ ಅವರ ವಿರುದ್ದ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.
ಈಗಾಗಲೇ ಘಟನೆಗೆ ಸಂಬಂಧಿಸಿದಂತೆ 20 ಮಂದಿಯನ್ನು ಬಂಧಿಸಲಾಗಿದ್ದು, ಉಳಿದವರಿಗೆ ಶೋಧ ಕಾರ್ಯ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಗಳನ್ನು ಸೆರೆ ಹಿಡಿಯುವಲ್ಲಿ ನಿರ್ಲಕ್ಷ್ಯ ತೋರಿದ ಆರೋಪದ ಮೇಲೆ ಹಲವು ಪೊಲೀಸ್ ಸಿಬಂದಿ ಮತ್ತು ನಾಗರಿಕ ಸ್ವಯಂ ಸೇವಕರನ್ನು ಅಮಾನತುಗೊಳಿಸಲಾಗಿದೆ ಎಂದು ತಿಳಿದು ಬಂದಿದೆ.