ಬೆಂಗಳೂರು, ಮಾ 24 (DaijiworldNews/DB): ವಿದ್ಯಾರ್ಥಿಗಳಿಗೆ ಮತ್ತು ಶಿಕ್ಷಕರಿಗೆ ಪಾಠ-ಪ್ರವಚನ ಕಲಿಕೆ ಮತ್ತು ಬೋಧನೆಗೆ ಸಹಕಾರಿಯಾಗುವ `ಈಗಲ್' ರೋಬೋದ ಪರೀಕ್ಷಾರ್ಥ ಪ್ರಾತ್ಯಕ್ಷಿಕೆಯು ಬೆಂಗಳೂರು ಮಲ್ಲೇಶ್ವರಂನ 13ನೇ ಅಡ್ಡರಸ್ತೆಯಲ್ಲಿರುವ ಬಾಲಕಿಯರ ಸರಕಾರಿ ಪ್ರೌಢಶಾಲೆಯಲ್ಲಿ ನಡೆಯಿತು.
ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್. ಅಶ್ವತ್ಥನಾರಾಯಣ ಈ ವೇಳೆ ಮಾತನಾಡಿ, ರೋಬೋದ ಕಾರ್ಯ ಸಾಮರ್ಥ್ಯ ತಿಳಿಯಲು ಪ್ರಾಯೋಗಿಕ ಪ್ರಾತ್ಯಕ್ಷಿಕೆ ನಡೆಸಲಾಗಿದೆ. ಸರಕಾರಿ ಶಿಕ್ಷಣ ಸಂಸ್ಥೆಗಳಲ್ಲಿ ಜಾಗತಿಕ ಗುಣಮಟ್ಟದ ಬೋಧನೆಗೆ ರೋಬೋ ಉತ್ತಮ ವಿಧಾನ ಎಂದರು.
ರೋಬೋ ಶಿಕ್ಷಕರಿಗೆ ಪರ್ಯಾಯ ಅಲ್ಲ. ಆದರೆ ಬೋಧನೆ ಮತ್ತು ಕಲಿಕೆಗೆ ಇದು ಸಹಾಯ ಮಾಡಲಿದೆ. ಕಲಿಕೆಯ ಗುಣಮಟ್ಟ ವೃದ್ಧಿಗೂ ಇದು ಪೂರಕವಾಗಲಿದೆ. ಮುಖ್ಯಮಂತ್ರಿಯವರಿಗೂ ರೋಬೋ ತೋರಿಸಿ ಮುಂದೆ ಮಲ್ಲೇಶ್ವರ ಕ್ಷೇತ್ರದ ಸರ್ಕಾರಿ ಶಿಕ್ಷಣ ಸಂಸ್ಥೆಗಳಲ್ಲಿ ಇದನ್ನು ಜಾರಿಗೊಳಿಸುವ ಉದ್ದೇಶ ಹೊಂದಲಾಗಿದೆ ಎಂದವರು ತಿಳಿಸಿದರು.
ಶಾಲೆಯ ಶಿಕ್ಷಕರು ಮತ್ತು ವಿದ್ಯಾರ್ಥಿನಿಯರು ರೋಬೋದ ಕಾರ್ಯಕ್ಷಮತೆ ನೋಡಿ ಬೆರಗಾದರು. ರೋಬೋಗೆ ಕೇಳಿದ ಪ್ರಶ್ನೆಗಳಿಗೆ ಅದು ಸರಿಯಾದ ಉತ್ತರವನ್ನೇ ನೀಡಿದಾಗ ಆಶ್ಚರ್ಯಚಕಿತರಾದರು.
ಇಂಡಸ್ ಟ್ರಸ್ಟ್ ನ ಸ್ಥಾಪಕ ಸಿಇಒ ಹಾಗೂ ವ್ಯವಸ್ಥಾಪಕ ನಿರ್ದೇಶಕ ಲೆ.ಜನರಲ್ ಅರ್ಜುನ್ ರಾಯ್, ಮಲ್ಲೇಶ್ವರ ಬಿಇಒ ಉಮಾದೇವಿ, ಕಾಲೇಜಿನ ಪ್ರಾಂಶುಪಾಲರಾದ ಡಾ.ರವಿ, ಶಾಲೆ ಉಪ ಪ್ರಾಂಶುಪಾಲ ರವಿಕುಮಾರ್ ಉಪಸ್ಥಿತರಿದ್ದರು.