ಬೆಂಗಳೂರು, ಮಾ 24 (DaijiworldNews/DB): ಕಾಮುಕ ವ್ಯಕ್ತಿಯೊಬ್ಬ ತನ್ನ ಸಹೋದರನ ಎರಡು ವರ್ಷದ ಮಗುವಿನ ಮೇಲೆ ಅತ್ಯಾಚಾರ ನಡೆಸಿ ತೀವ್ರ ರಕ್ತಸ್ರಾವದಿಂದ ಮಗು ಸಾವನ್ನಪ್ಪಿದ ಅಮಾನವೀಯ ಘಟನೆ ಬೆಂಗಳೂರು ಸಮೀಪದಲ್ಲಿ ನಡೆದಿದೆ.
ಅತ್ತಿಬೆಲೆ ಸಮೀಪದ ನೆರಳೂರಲ್ಲಿ ವಾಸವಿದ್ದ ದೀಪು ಎಂಬಾತನೇ ಕಾಮುಕ ವ್ಯಕ್ತಿ. ಈತ ಮೃತ ಮಗುವಿನ ತಂದೆಯ ಅಣ್ಣನಾಗಿದ್ದು, ಮಗುವಿನ ದೊಡ್ಡಪ್ಪ.
ಈತ ಕಳೆದ ಕೆಲ ದಿನಗಳ ಹಿಂದೆ ತನ್ನ ತಮ್ಮನ ಮನೆಗೆ ಹೋಗಿ ತಮ್ಮನ ಮಗಳನ್ನು ಮತ್ತೊಂದು ಊರಿಗೆ ಕರೆ ತಂದಿದ್ದ. ಬಳಿಕ ಮಾರ್ಚ್ 20ರಂದು ಮಗುವನ್ನು ಆಕೆಯ ಮನೆಗೆ ಬಿಟ್ಟು ಬರಲು ಕಾರಿನಲ್ಲಿ ತನ್ನ ಸ್ನೇಹಿತನೊಂದಿಗೆ ತೆರಳಿದ್ದ. ಮಾರ್ಗ ಮಧ್ಯೆ ಕಾರು ನಿಲ್ಲಿಸಿ ಸ್ನೇಹಿತನೊಂದಿಗೆ ಮದ್ಯ ತರುವಂತೆ ಹೇಳಿದ್ದ. ಸ್ನೇಹಿತ ಕಾರಿನಿಂದ ಇಳಿದು ಹೋದ ತತ್ ಕ್ಷಣ ಮಗುವಿನ ಮೇಲೆ ಆತ ಅತ್ಯಾಚಾರ ಎಸಗಿದ್ದಾನೆ. ಆತನ ಪೈಶಾಚಿಕ ಕೃತ್ಯದಿಂದ ಮಗುವಿನ ಉಸಿರು ಸ್ತಬ್ಧವಾಗಿ ತೀವ್ರ ರಕ್ತಸ್ರಾವ ಉಂಟಾಗಿತ್ತು.
ಮಗು ಉಸಿರಾಡದೆ ಇರುವುದನ್ನು ನೋಡಿ ಭಯಗೊಂಡ ದೀಪು ಅತ್ತಿಬೆಲೆಯ ಖಾಸಗಿ ಆಸ್ಪತ್ರೆಗೆ ತೆರಳಿ ಮಗುವಿನ ತಲೆಗೆ ಗಾಯ ಆಗಿದ್ದು, ಚಿಕಿತ್ಸೆ ನೀಡುವಂತೆ ಕೇಳಿಕೊಂಡಿದ್ದ. ಆದರೆ ಅದಾಗಲೇ ಮಗು ಸಾವನ್ನಪ್ಪಿತ್ತು. ಬಳಿಕ ಅತ್ತಿಬೆಲೆ ಪೊಲೀಸ್ ಠಾಣೆಗೆ ತೆರಳಿ ಹಠಾತ್ತನೆ ಕಾರು ಬ್ರೇಕ್ ಹಾಕಿದಾಗ ಮಗುವಿನ ತಲೆಗೆ ಗಾಯವಾಗಿ ಮಗು ಮೃತಪಟ್ಟಿದೆ ಎಂಬುದಾಗಿ ಸುಳ್ಳು ದೂರು ದಾಖಲಿಸಲು ಮುಂದಾಗಿದ್ದ. ಆದರೆ, ಆತನ ನಡವಳಿಕೆ ಮೇಲೆ ಸಂಶಯ ಬಂದ ಹಿನ್ನೆಲೆಯಲ್ಲಿ ಪೊಲೀಸರು ಮಗುವಿನ ಮರಣೋತ್ತರ ಪರೀಕ್ಷೆಗೆ ಶಿಫಾರಸ್ಸು ಮಾಡಿದ್ದರು.
ಇದರಲ್ಲಿ ಮಗುವನ್ನು ಅತ್ಯಾಚಾರ ಮಾಡಿ ಕೊಲೆ ಮಾಡಿರುವುದು ಸ್ಪಷ್ಟವಾಗಿದೆ. ಈ ಹಿನ್ನೆಲೆಯಲ್ಲಿ ಕಾಮುಕ ದೊಡ್ಡಪ್ಪ ದೀಪುನನ್ನು ಪೋಕ್ಸೋ ಕಾಯಿದೆಯಡಿ ಪೊಲೀಸರು ಬಂಧಿಸಿದ್ದಾರೆ.