ಬೆಂಗಳೂರು, ಮಾ 24 (DaijiworldNews/DB): ನೇಣು ಬಿಗಿದ ಸ್ಥಿತಿಯಲ್ಲಿ ಪತ್ರಕರ್ತೆಯೋರ್ವರ ಶವ ಪತ್ತೆಯಾಗಿದ್ದು, ಪತಿಯೇ ಕೊಲೆಗೈದಿರುವುದಾಗಿ ಕುಟುಂಬಸ್ಥರು ಶಂಕೆ ವ್ಯಕ್ತಪಡಿಸಿದ್ದಾರೆ.
ಪತ್ರಕರ್ತೆ ಶ್ರುತಿ (35) ಕೊಲೆಯಾದ ರೀತಿಯಲ್ಲಿ ಪತ್ತೆಯಾದವರು. ಶ್ರುತಿ ಮತ್ತು ಅನೀಶ್ ಅವರಿಗೆ 2017ರಲ್ಲಿ ವಿವಾಹವಾಗಿದ್ದು, ಬೆಂಗಳೂರು ವೈಟ್ ಫೀಲ್ಡ್ ನಲ್ಲೂರುಹಳ್ಳಿ ರಸ್ತೆಯ ಎಸ್.ವಿ. ಮೈಪೇರ್ ವಸತಿ ಸಮುಚ್ಚಯದ ಫ್ಲಾಟ್ ನಲ್ಲಿ ವಾಸವಾಗಿದ್ದರು. ಶ್ರುತಿ ರಾಯಿಟರ್ಸ್ ಸಂಸ್ಥೆಯಲ್ಲಿ ಹಾಗೂ ಅನೀಶ್ ಖಾಸಗಿ ಕಂಪೆನಿಯೊಂದರಲ್ಲಿ ಉದ್ಯೋಗದಲ್ಲಿದ್ದರು. ಮೊದ ಮೊದಲು ಶ್ರುತಿಯೊಂದಿಗೆ ಚೆನ್ನಾಗಿಯೇ ಇದ್ದ ಅನೀಶ್ ಬಳಿಕ ಸಂಬಳದ ಹಣವನ್ನು ತವರು ಮನೆಗೆ ಕೊಡುತ್ತಿದ್ದೀಯಾ ಎಂಬುದಾಗಿ ಕ್ಯಾತೆ ತೆಗೆದು ಗಲಾಟೆ ಎಬ್ಬಿಸುತ್ತಿದ್ದ. ಅಲ್ಲದೆ ಮದ್ಯಪಾನ ಮಾಡಿ ಮನೆಗೆ ಬಂದು ಶ್ರುತಿ ಮೇಲೆ ರೇಗಾಡುತ್ತಿದ್ದ ಎಂಬುದಾಗಿ ಶ್ರುತಿ ಸಹೋದರ ನಿಶಾಂತ್ ನಾರಾಯಣನ್ ದೂರು ನೀಡಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಪತಿ ಅನೀಶ್ ವಿರುದ್ಧ ವೈಟ್ ಫೀಲ್ಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಮನೆಯಲ್ಲಿ ಹಿಡನ್ ಕ್ಯಾಮರಾ ಇಟ್ಟು ಸಹೋದರಿ ಶ್ರುತಿ ಚಲನವಲನಗಳ ಮೇಲೆ ಅನೀಶ್ ಗಮನ ಇಡುತ್ತಿದ್ದ. ಅಲ್ಲದೆ ಈ ಹಿಂದೆ ಜನವರಿ 15ರಂದು ಕೊಲೆಗೆ ಯತ್ನಿಸಿದ್ದ. ಈ ವೇಳೆ ಆಕೆ ಜೋರಾಗಿ ಕೂಗಿಕೊಂಡಿದ್ದು, ಫ್ಲ್ಯಾಟ್ ನ ಭದ್ರತಾ ಸಿಬಂದಿ ಬಂದು ರಕ್ಷಿಸಿದ್ದರು. ನನ್ನ ಪತ್ನಿ ಮಾರ್ಚ್ 20 ಮತ್ತು 21ರಂದು ಪದೇಪದೇ ಶ್ರುತಿಗೆ ಕರೆ ಮಾಡಿದರೂ ಆಕೆ ಕರೆ ಸ್ವೀಕರಿಸಿರಲಿಲ್ಲ. ಈ ನಿಟ್ಟಿನಲ್ಲಿ ಮರುದಿನ ಬೆಳಗ್ಗೆ ಫ್ಲಾಟ್ ಗೆ ಬಂದು ಕಿಟಕಿಯಲ್ಲಿ ಇಣುಕಿ ನೋಡಿದಾಗ ಯಾರೂ ಗೋಚರಿಸಲಿಲ್ಲ. ಬಳಿಕ ಭದ್ರತಾ ಸಿಬಂದಿ ಸಹಾಯದಿಂದ ಬಾಗಿಲು ಒಡೆದು ಒಳೆಗೆ ಹೋದಾಗ ಶ್ರುತಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಳು. ಆಕೆಯ ಪತಿ ಅನೀಶ್ ಕೊಲೆ ಮಾಡಿರುವ ಶಂಕೆ ಇದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.