ಬೆಂಗಳೂರು, ಮಾ. 23 (DaijiworldNews/SM): ಹಿಂದೂವೇತರ ವ್ಯಾಪಾರಿಗಳಿಗೆ ದೇವಸ್ಥಾನದ ಜಾತ್ರೋತ್ಸವ ಸಂದರ್ಭದಲ್ಲಿ ವ್ಯಾಪಾರಕ್ಕೆ ಅವಕಾಶವಿಲ್ಲ ಎಂಬ ನಿಯಮವನ್ನು ರೂಪಿಸಿದ್ದು ಕಾಂಗ್ರೆಸ್ ಸರಕಾರ. ಅದನ್ನು ಪ್ರಸ್ತುತ ಜಾರಿಗೆ ತರಲಾಗಿದೆ ಎಂದು ಕಾನೂನು ಸಚಿವ ಮಾಧುಸ್ವಾಮಿ ಸದನದಲ್ಲಿ ಉತ್ತರಿಸಿದ್ದಾರೆ.
ವಿಧಾನಸಭೆಯ ಕಲಾಪದ ಶೂನ್ಯ ವೇಳೆಯಲ್ಲಿ ಪ್ರತಿ ಪಕ್ಷದ ಉಪನಾಯಕ ಯು.ಟಿ. ಖಾದರ್ ವಿಚಾರ ಪ್ರಸ್ತಾಪಿಸಿದ್ದರು. ಹಾಗೂ ದೇವಸ್ಥಾನ ವಠಾರ ಹಾಗೂ ಬೀದಿಗಳಲ್ಲಿ ಎಲ್ಲರಿಗೂ ವ್ಯಾಪಾರಕ್ಕೆ ಮುಕ್ತ ಅವಕಾಶ ನೀಡುವಂತೆ ಮನವಿ ಮಾಡಿಕೊಂಡಿದ್ದರು.
ಈ ವೇಳೆ ಕಾಂಗ್ರೆಸ್ ಸರಕಾರದ ಅಧಿಕಾರವಧಿಯಲ್ಲಿ ಜಾರಿಗೆ ತರಲಾಗಿರುವ ಕಾನೂನನ್ನು ಉಲ್ಲೇಖಿಸಿದ ಸಚಿವರು, ಕಾಂಗ್ರೆಸ್ ಸರಕಾರ ಇದ್ದ ಸಂದರ್ಭದಲ್ಲೇ ೨೦೧೧ರಲ್ಲಿ ಕಾನೂನು ಜಾರಿಗೆ ತರಲಾಗಿದೆ. ಅದರಂತೆ ದೇವಸ್ಥಾನಕ್ಕೆ ಸಂಬಂಧಿಸಿದ ಜಮೀನಿನಲ್ಲಿ ಹಿಂದೂಯೇತರರಿಗೆ ಅವಕಾಶ ಇಲ್ಲ ಎನ್ನುವುದನ್ನು ಉಲ್ಲೇಖಿಸಲಾಗಿದೆ ಎಂದು ಲಾ ಮಿನಿಸ್ಟರ್ ಮಾಧುಸ್ವಾಮಿ ಕಾನೂನಾತ್ಮಕವಾಗಿಯೇ ಉತ್ತರಿಸಿದ್ದಾರೆ.