ಬೆಂಗಳೂರು, ಮಾ 23 (DaijiworldNews/DB): ಹಿಂದೂ ದೇವಾಲಯಗಳ ಜಾತ್ರೆಗಳಲ್ಲಿ ಮುಸ್ಲಿಂ ವರ್ತಕರಿಗೆ ವ್ಯಾಪಾರಕ್ಕೆ ಅವಕಾಶ ನಿರಾಕರಿಸಿದ ವಿಷಯವು ಬುಧವಾರ ಸದನದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರ ನಡುವಿನ ವಾಕ್ಸಮರಕ್ಕೆ ಕಾರಣವಾಯಿತು.
ಶೂನ್ಯ ವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಶಾಸಕ ಯು. ಟಿ. ಖಾದರ್, ಪರಸ್ಪರ ಸಾಮರಸ್ಯದಿಂದ ರಾಜ್ಯದ ಅಭಿವೃದ್ದಿ ಸಾಧ್ಯ. ಆದರೆ, ಧರ್ಮಗಳ ಹೊರತಾಗಿ ಹೊಟ್ಟೆಪಾಡಿನ ಉದ್ದೇಶದಿಂದ ವ್ಯಾಪಾರ ನಡೆಸುತ್ತಿರುವ ಮುಸ್ಲಿಮರಿಗೆ ಕೆಲವು ದೇವಾಲಯಗಳ ಜಾತ್ರೆಯಲ್ಲಿ ವ್ಯಾಪಾರಕ್ಕೆ ನಿರ್ಬಂಧ ಹೇರುತ್ತಿದ್ದಾರೆ. ಇದು ಹೇಡಿಗಳು ಮಾಡುವ ಕೆಲಸ ಎಂದರು.
ಇದನ್ನು ಆಕ್ಷೇಪಿಸಿದ ಬಿಜೆಪಿ ಶಾಸಕರಾದ ರಘುಪತಿ ಭಟ್, ಹರೀಶ್ ಪೂಂಜಾ, ಸಂಜೀವ್ ಮಠಂದೂರು, ರೇಣುಕಾಚಾರ್ಯ ಮತ್ತಿತರರು ಹೇಡಿಗಳು ಯಾರು ಎಂದು ಖಾದರ್ ಹೇಳಬೇಕು ಎಂಬುದಾಗಿ ಪಟ್ಟು ಹಿಡಿದರು. ಇದು ತೀವ್ರ ವಾಕ್ಸಮರಕ್ಕೆ ಕಾರಣವಾಯಿತು. ಬಳಿಕ ಯು. ಟಿ. ಖಾದರ್ ಅವರು, ನಾನು ಯಾವುದೇ ಧರ್ಮವನ್ನು ಉದ್ದೇಶಿಸಿ ಹೇಡಿಗಳು ಎಂದಿಲ್ಲ. ವ್ಯಾಪಾರಕ್ಕೆ ಅವಕಾಶ ನಿರ್ಬಂಧಿಸುವುದು ಹೇಡಿಗಳ ಕೆಲಸ ಎಂದಿದ್ದೇನೆ ಎಂದರು. ಎರಡೂ ಪಕ್ಷಗಳ ಸದಸ್ಯರ ನಡುವೆ ಮಾತಿನ ಚಕಮಕಿ ನಡೆದು ಸದನದಲ್ಲಿ ಗದ್ದಲಕ್ಕೆ ಕಾರಣವಾಯಿತು.
ಬಳಿಕ ಮಧ್ಯಪ್ರವೇಶ ಮಾಡಿದ ಸಭಾಧ್ಯಕ್ಷರು ಪರಿಸ್ಥಿತಿ ಸರಿಪಡಿಸುವಂತೆ ಕಾನೂನು ಸಚಿವ ಮಾಧುಸ್ವಾಮಿ ಅವರಲ್ಲಿ ವಿನಂತಿಸಿದರು. ಸದಸ್ಯರೆಲ್ಲರೂ ಸ್ವಸ್ಥಾನದಲ್ಲಿ ಕುಳಿತುಕೊಂಡ ಬಳಿಕ ಮತ್ತೆ ವಿಷಯ ಪ್ರಸ್ತಾಪಿಸಿದ ಯು. ಟಿ. ಖಾದರ್, ಮುಸ್ಲಿಂ ವ್ಯಾಪಾರಿಗಳಿಗೆ ವ್ಯಾಪಾರಕ್ಕೆ ಅವಕಾಶವಿಲ್ಲ ಎಂಬುದಾಗಿ ಕೆಲವು ಧಾರ್ಮಿಕ ಕ್ಷೇತ್ರಗಳಲ್ಲಿ ಬ್ಯಾನರ ಹಾಕಿದ್ದಾರೆ. ಸಾಮರಸ್ಯ ಕದಡುವ ಕೆಲಸವನ್ನು ಯಾರೂ ಮಾಡಬಾರದು. ಇದರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಕಾಂಗ್ರೆಸ್ನ ರಿಜ್ವಾನ್ ಹರ್ಷದ್ ಕೂಡಾ ಇದಕ್ಕೆ ಧ್ವನಿಗೂಡಿಸಿದರು.
ಕಾನೂನು ಸಚಿವ ಉತ್ತರಿಸಿ, 2002ರ ಮಾಧುಸ್ವಾಮಿಹಿಂದೂ ಧಾರ್ಮಿಕ ದತ್ತಿ ಕಾಯ್ದೆಯಲ್ಲಿ ಧಾರ್ಮಿಕ ಸಂಸ್ಥೆಗಳ ಸನಿಹದ ಕಟ್ಟಡ, ಜಮೀನು, ನಿವೇಶನಗಳನ್ನು ಹಿಂದೂಯೇತರರಿಗೆ ಗುತ್ತಿಗೆ ನೀಡುವಂತಿಲ್ಲ ಎಂದು ಹೇಳಿದೆ. ಕಾಂಗ್ರೆಸ್ ಸರಕಾರವಿದ್ದಾಗಲೇ ಈ ಕಾಯ್ದೆ ಜಾರಿಗೆ ಬಂದಿದೆ. ದೇವಳದ ಆವರಣದಿಂದಾಚೆ ಆದರೆ ಸರಿಪಡಿಸಬಹುದು ಎಂದು ತಿಳಿಸಿದರು.