ಮೈಸೂರು, ಮಾ 23 (DaijiworldNews/DB): ಮುಸ್ಲಿಮರು ಈ ದೇಶದ ಪ್ರಜೆಗಳು. ಅವರಿಗೆ ಹಿಂದೂ ದೇವಳಗಳ ಜಾತ್ರೆಗಳಲ್ಲಿ ವ್ಯಾಪಾರಕ್ಕೆ ಅವಕಾಶ ನೀಡದಿರುವುದು ಸಂವಿಧಾನ ವಿರೋಧಿ ನಿಲುವು ಎಂದು ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್ ಹೇಳಿದ್ದಾರೆ.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಬುಧವಾರ ಮಾತನಾಡಿದ ಅವರು, ಹಿಂದೂ ದೇವಳದ ಜಾತ್ರೆಗಳಲ್ಲಿ ಮುಸ್ಲಿಂ ವರ್ತಕರಿಗೆ ವ್ಯಾಪಾರಕ್ಕೆ ಅವಕಾಶ ನೀಡಬೇಕು. ಅವರು ಈ ದೇಶದ ಪ್ರಜೆಗಳು. ವ್ಯಾಪಾರ ಮಾಡುವುದು ಜೀವನ ನಿರ್ವಹಣೆಗಾಗಿ. ಇಂತಹ ವಿಚಾರಗಳಲ್ಲಿ ಬಹಿಷ್ಕಾರ ಸಲ್ಲದು. ರಾಜ್ಯ ಸರ್ಕಾರ ತತ್ ಕ್ಷಣ ಮುಸ್ಲಿಂ ವರ್ತಕರ ನೆರವಿಗೆ ಧಾವಿಸಬೇಕು ಎಂದು ಒತ್ತಾಯಿಸಿದರು.
ತೆಲುಗಿನ ಆರ್ ಆರ್ ಆರ್ ಚಿತ್ರಕ್ಕಾಗಿ ಜೇಮ್ಸ್ ಎತ್ತಂಗಡಿಯಾಗುತ್ತಿದೆ ಎಂಬುದಾಗಿ ತಿಳಿದು ಬಂದಿದೆ. ಆದರೆ ಚಿತ್ರಮಂದಿರಗಳಿಂದ ಜೇಮ್ಸ್ ಚಿತ್ರ ತೆರವು ಮಾಡುವುದು ಸರಿಯಾದ ಕ್ರಮವಲ್ಲ. ಕನ್ನಡಕ್ಕೆ ಮೊದಲ ಆದ್ಯತೆ ನೀಡಬೇಕು. ಡಾ. ರಾಜ್ ಕುಮಾರ್ ಕುಟುಂಬ ರಾಜ್ಯದಲ್ಲಿ ಸಾಂಸ್ಕೃತಿಕ ರಾಯಭಾರಿಯಂತೆ. ಜೇಮ್ಸ್ ಚಿತ್ರ ಪುನೀತ್ ಅಗಲಿಕೆಯ ನಂತರ ಬಿಡುಗಡೆಯಾಗಿದೆ. ಅವರಿಗೆ ಲಕ್ಷಾಂತರ ಅಭಿಮಾನಿಗಳು ಪ್ರೀತಿ ತೋರಿದ್ದಾರೆ. ಹೀಗಿರುವಾಗ ಚಿತ್ರವನ್ನು ಎತ್ತಂಗಡಿ ಮಾಡುವುದು ತಪ್ಪು. ಇದರಿಂದ ಅವರ ಸಮಸ್ತ ಅಭಿಮಾನಿಗಳ ಮನಸ್ಸಿಗೆ ಘಾಸಿಯಾಗಲಿದೆ ಎಂದು ಜೇಮ್ಸ್ ಎತ್ತಂಗಡಿ ಕುರಿತ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯೆ ನೀಡಿದರು.