ಮೈಸೂರು, ಮಾ 23 (DaijiworldNews/DB): ಮೈಸೂರು ಜಿಲ್ಲಾಧಿಕಾರಿಯಾಗಿದ್ದ ವೇಳೆ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಕೇಳಿ ಬಂದಿದ್ದ ಬಟ್ಟೆ ಬ್ಯಾಗ್ ಖರೀದಿ ಹಗರಣ ಆರೋಪದ ತನಿಖೆಗೆ ಸರ್ಕಾರ ಆದೇಶ ನೀಡಿದೆ.
ಮೈಸೂರನ್ನು ಪ್ಲಾಸ್ಟಿಕ್ ಮುಕ್ತಗೊಳಿಸುವ ನೆಪದಲ್ಲಿ ರೋಹಿಣಿ ಸಿಂಧೂರಿ ಬಟ್ಟೆ ಬ್ಯಾಗ್ ಖರೀದಿಯಲ್ಲಿ ಅಕ್ರಮವೆಸಗಿದ್ದಾರೆ. ಅಲ್ಲದೇ ಸ್ಥಳೀಯಾಡಳಿತಗಳ ಪೂರ್ವಾನುಮತಿ ಇಲ್ಲದೆ ದುಬಾರಿ ಬೆಲೆಯ ಬ್ಯಾಗ್ ಗಳನ್ನು ಖರೀದಿಸಲಾಗಿತ್ತು ಎಂದು ಮಾಜಿ ಸಚಿವ ಸಾ.ರಾ. ಮಹೇಶ್ ಈ ಹಿಂದೆ ಆರೋಪಿಸಿದ್ದರು. ಅಲ್ಲದೆ, ಇದಕ್ಕೆ ಸಂಬಂಧಪಟ್ಟ ದಾಖಲೆಗಳನ್ನೂ ಅವರು ಬಿಡುಗಡೆ ಮಾಡಿದ್ದರು. ಈ ಆರೋಪವು ಇದೀಗ ಮುನ್ನೆಲೆಗೆ ಬಂದಿದ್ದು, ನಡೆದಿದೆ ಎನ್ನಲಾದ ಬಟ್ಟೆ ಬ್ಯಾಗ್ ಖರೀದಿ ಹಗರಣವನ್ನು ತನಿಖೆ ನಡೆಸುವಂತೆ ಸರ್ಕಾರ ಆದೇಶಿಸಿದೆ.
7 ಕೋಟಿ ರೂ.ಗಳಿಗೂ ಅಧಿಕ ಹಣ ನೀಡಿ 14,71,458 ಬಟ್ಟೆ ಬ್ಯಾಗ್ ಖರೀದಿ ಮಾಡಲಾಗಿದೆ. ಆದರೆ ಇದಕ್ಕೆ ತಗಲುವ ಒಟ್ಟು ವೆಚ್ಚ 1,47,15,000 ರೂ. ಆಗಿದೆ. ಆ ಮೂಲಕ ಭ್ರಷ್ಟಾಚಾರ ನಡೆದಿದ್ದು, ಸ್ಪಷ್ಟವಾಗಿದ್ದು, ರೋಹಿಣಿ ಸಿಂಧೂರಿ 6.18 ಕೋಟಿ ರೂ. ಕಿಕ್ ಬ್ಯಾಕ್ ಪಡೆದಿದ್ದಾರೆ ಎಂದು ಸಾ.ರಾ ಮಹೇಶ್ ಆರೋಪಿಸಿದ್ದರು.