ಬೆಂಗಳೂರು, ಮಾ 23 (DaijiworldNews/MS): ಹಿಂದೂ ವಿರೋಧಿ ನೀತಿಯಿಂದ ದೇಶದೆಲ್ಲೆಡೆ ನೆಲೆ ಕಚ್ಚಿರುವ ಕಾಂಗ್ರೆಸ್ಸಿಗೆ ಈಗ ಹಿಂದುತ್ವದ ನೆನಪಾಗಿದೆ ಹೀಗಾಗಿ ಕಾಂಗ್ರೆಸ್ಸಿಗರು ಚುನಾವಣಾ ಹಿಂದೂಗಳಾಗಿ ಮಾರ್ಪಾಡಾಗುತ್ತಿದ್ದಾರೆ ಎಂದು ಬಿಜೆಪಿ ವ್ಯಂಗವಾಡಿದೆ.
ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಬಿಜೆಪಿ, 'ಮಾನ್ಯ ಡಿಕೆಶಿ ಅವರೇ "ಮೃದು ಹಿಂದುತ್ವ" ಎಂದರೇನು? ಪಠ್ಯಪುಸ್ತಕಗಳಲ್ಲಿ ಭಗವದ್ಗೀತೆ ಅಳವಡಿಕೆಯ ಬಿಜೆಪಿ ನಿರ್ಧಾರಕ್ಕೆ ಬೆಳಗ್ಗೆ ವಿರೋಧಿಸುವುದು.ಸಂಜೆಯಾಗುತ್ತಲೇ, ಹಿಂದೂಗಳ ಮತ ಕಳೆದುಕೊಳ್ಳುತ್ತೇವೆ ಎಂಬ ಭಯದಲ್ಲಿ "ಯದಾ ಯದಾ ಹೀ ಧರ್ಮಸ್ಯ" ಮಂತ್ರ ಪಠಿಸುವುದು. ಇದು ಮೃದು ಹಿಂದುತ್ವವೇ ಎಂದು ಪ್ರಶ್ನಿಸಿದೆ.
ಇತ್ತೀಚೆಗೆ ಕಾಂಗ್ರೆಸ್ ಪಕ್ಷವು "ಮೃದು ಹಿಂದುತ್ವ" ತಂತ್ರ ಅಳವಡಿಸಿಕೊಂಡಿದೆ ಎಂಬುದು ಚರ್ಚೆಯಾಗುತ್ತಿದೆ.ಹಿಂದೂ ವಿರೋಧಿ ನೀತಿಯಿಂದ ದೇಶದೆಲ್ಲೆಡೆ ನೆಲೆ ಕಚ್ಚಿರುವ ಕಾಂಗ್ರೆಸ್ಸಿಗೆ ಈಗ ಹಿಂದುತ್ವದ ನೆನಪಾಗಿದೆ.ರಾಹುಲ್ ಗಾಂಧಿ ಅವರಂತೆ ಡಿಕೆಶಿ, ಸಿದ್ದರಾಮಯ್ಯ ಚುನಾವಣಾ ಹಿಂದೂಗಳಾಗಿ ಮಾರ್ಪಾಡಾಗುತ್ತಿದ್ದಾರೆ ಎಂದು ಕುಹಕವಾಡಿದೆ.
ಗೋಹತ್ಯೆಯ ಸಮರ್ಥನೆ ,ಗೋಕಳ್ಳತನವನ್ನು ಸಮರ್ಥನೆ ಮಾಡುವುದು, ಗೋಕಳ್ಳನಿಗೆ ಪರಿಹಾರ ನೀಡುವುದು, ಗೋ ಹತ್ಯೆ ನಿಷೇಧ ಕಾನೂನನ್ನು ವಿರೋಧಿಸುವುದು ಮೃದು ಹಿಂದುತ್ವದ ಲಕ್ಷಣವೇ ಎಂದು ಬಿಜೆಪಿ ಪ್ರಶ್ನಿಸಿದೆ.