ಕೋಲ್ಕತ್ತ, ಮಾ 23 (DaijiworldNews/MS): ಬಿರ್ಭೂಮ್ ಜಿಲ್ಲೆಯ ರಾಮ್ಪುರಹಾಟ್ ಎಂಬಲ್ಲಿ ಮಂಗಳವಾರ ನಡೆದ ಹಿಂಸಾಕೃತ್ಯಕ್ಕೆ ಸಂಬಂಧಿಸಿ ಬಂಧಿತರ ಸಂಖ್ಯೆ 22ಕ್ಕೆ ಏರಿಕೆಯಾಗಿದೆ. ಈ ನಡುವೆ ಮಂಗಳವಾರ ನಡೆದ ಹಿಂಸಾಕೃತ್ಯಕ್ಕೆ ಸಂಬಂಧಿಸಿ ಅಪರಾಧಿಗಳ ವಿರುದ್ಧ ಅವರ ರಾಜಕೀಯ ಬಣ್ಣಗಳನ್ನು ಲೆಕ್ಕಿಸದೆ ಕಠಿಣ ಕ್ರಮ ಜರುಗಿಸುವುದಾಗಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.
8 ಮಂದಿ ಜೀವಂತವಾಗಿ ಸುಟ್ಟುಹೋದ ಘಟನೆ ನಡೆದ ದಿನವೇ ದಿನ 11 ಮಂದಿಯನ್ನು ಬಂಧಿಸಲಾಗಿತ್ತು. ಇದೀಗ ಬಂಧಿತರ ಸಂಖ್ಯೆ 22ಕ್ಕೆ ಏರಿಕೆಯಾಗಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ರಾಮ್ಪುರಹಾಟ್ ನಗರದ ಹೊರವಲಯದಲ್ಲಿರುವ ಬೊಗ್ತುಯಿ ಗ್ರಾಮದ 10 ಮನೆಗಳ ಮೇಲೆ ದುಷ್ಕರ್ಮಿಗಳು ನಸುಕಿನ ವೇಳೆ ಮನೆಗಳಿಗೆ ಬೆಂಕಿ ಹಚ್ಚಿದ್ದರಿಂದ ಇಬ್ಬರು ಮಕ್ಕಳು ಸೇರಿದಂತೆ ಎಂಟು ಮಂದಿ ಜೀವಂತವಾಗಿ ಸುಟ್ಟುಹೋಗಿದ್ದಾರೆ. ಈ ಘಟನೆಗೆ ಕೆಲವೇ ಗಂಟೆಗಳ ಮುನ್ನ, ಸ್ಥಳೀಯ ಪಂಚಾಯಿತಿಯ ಟಿಎಂಸಿ ಮುಖಂಡನ ಹತ್ಯೆಯಾಗಿತ್ತು. ಟಿಎಂಸಿಯ ಎರಡು ಗುಂಪುಗಳ ನಡುವಣ ದ್ವೇಷವೇ ಘಟನೆಗೆ ಕಾರಣ ಎನ್ನಲಾಗುತ್ತಿದೆ.