ಬೆಂಗಳೂರು, ಮಾ 23 (DaijiworldNews/DB): ಅಟೋರಿಕ್ಷಾಗಳನ್ನು ಕಳವುಗೈದು ಮಾರಾಟ ಮಾಡುತ್ತಿದ್ದ ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕನನ್ನು ಕೆಂಗೇರಿ ಪೊಲೀಸರು ಬುಧವಾರ ಬಂಧಿಸಿದ್ದಾರೆ. ಈತ ಈವರೆಗೆ ಆರು ರಿಕ್ಷಾಗಳನ್ನು ಕಳವು ಮಾಡಿದ್ದ ಎಂಬುದಾಗಿ ಪೊಲೀಸರು ತಿಳಿಸಿದ್ದಾರೆ.
ಮನೆ ಮುಂಭಾಗದಲ್ಲಿ ನಿಲ್ಲಿಸಿದ್ದ ಅಟೋಗಳ ಮೇಲೆ ಈ ಬಾಲಾರೋಪಿ ಕಣ್ಣಿಡುತ್ತಿದ್ದ. ಬಳಿಕ ಯಾರಿಗೂ ತಿಳಿಯದಂತೆ ಅವುಗಳನ್ನು ಕಳವುಗೈದು ಬಿಡಿಭಾಗಗಳನ್ನು ಬದಲಾಯಿಸಿ ಮಾರಾಟ ಮಾಡುತ್ತಿದ್ದ. ಅಲ್ಲದೆ, ನಂಬರ್ ಪ್ಲೇಟ್ ಗಳನ್ನು ಬದಲಾಯಿಸಿ ಸುಳ್ಳು ದಾಖಲೆಗಳನ್ನೂ ಸೃಷ್ಟಿಸುತ್ತಿದ್ದ ಎಂಬ ಆಘಾತಕಾರಿ ಅಂಶ ಈ ವೇಳೆ ಪೊಲೀಸರಿಗೆ ಗೊತ್ತಾಗಿದೆ. ಸದ್ಯ ಪೊಲೀಸರು ಆರೋಪಿಯನ್ನು ಕಸ್ಟಡಿಗೆ ಒಪ್ಪಿಸಿದ್ದಾರೆ.
ಈತ ನಗರದ ಬೇರೆ ಬೇರೆ ಕಡೆಗಳಲ್ಲಿ ಒಟ್ಟು ಆರು ಅಟೋರಿಕ್ಷಾಗಳನ್ನು ಕದ್ದಿರುವುದಾಗಿ ಒಪ್ಪಿಕೊಂಡಿದ್ದಾನೆ. ಕದ್ದಿರುವ ಅಟೋರಿಕ್ಷಾಗಳ ಒಟ್ಟು ಮೌಲ್ಯ 15 ಲಕ್ಷ ರೂ.ಗಳಾಗಿವೆ. ಕೆಂಗೇರಿ, ಕಾಮಾಕ್ಷಿಪಾಳ್ಯ, ಕಾಟನ್ ಪೇಟೆ, ಚಂದ್ರಾ ಲೇಔಟ್, ಕುಂಬಳಗೋಡು ಮತ್ತು ಶೇಷಾದ್ರಿಪುರಂನಲ್ಲಿ ಅಟೋರಿಕ್ಷಾಗಳನ್ನು ಕಳವು ಮಾಡಿರುವುದಾಗಿ ಆತ ಒಪ್ಪಿಕೊಂಡಿದ್ದಾನೆ ಎನ್ನಲಾಗಿದೆ.
ಸದ್ಯ ಪೊಲೀಸರು ಈತನನ್ನು ತನಿಖೆ ನಡೆಸುತ್ತಿದ್ದು, ಈತನೊಂದಿಗೆ ಯಾವುದಾದರೂ ಗ್ಯಾಂಗ್ ಕಾರ್ಯನಿರ್ವಹಿಸುತ್ತಿದ್ದೆಯೇ ಆಥವಾ ಬಾಲಕರದ್ದೇ ಗ್ಯಾಂಗ್ ಇರಬಹುದೇ ಎಂಬ ಬಗ್ಗೆ ಮಾಹಿತಿಗಳನ್ನು ಕಲೆ ಹಾಕುತ್ತಿದ್ದಾರೆ.