ಲಹರಿಘಾಟ್, ಮಾ 23 (DaijiworldNews/MS): ಬಿಸ್ಕೆಟ್ ಕದ್ದ ಆರೋಪದಲ್ಲಿ 13 ವರ್ಷದ ಅಪ್ರಾಪ್ತ ಬಾಲಕನಿಗೆ, ಪೊಲೀಸ್ ಠಾಣೆಯೊಳಗೆ ಥಳಿಸಿದ ಆರೋಪದ ಮೇಲೆ ಅಸ್ಸಾಂ ಪೊಲೀಸ್ ಇಲಾಖೆಯ ಸಿಬ್ಬಂದಿಯೋರ್ವರನ್ನು ಅಮಾನತುಗೊಳಿಸಲಾಗಿದೆ.
ಪೊಲೀಸ್ ಅಧಿಕಾರಿ ಪೊಲೀಸ್ ಠಾಣೆಯೊಳಗೆ ಅಪ್ರಾಪ್ತ ಬಾಲಕನಿಗೆ ಪದೇ ಪದೇ ದೊಣ್ಣೆಯಿಂದ ಥಳಿಸುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದು, ಮೋರಿಗಾಂವ್ ಜಿಲ್ಲೆಯ ಲಹರಿಘಾಟ್ ಪೊಲೀಸ್ ಠಾಣೆಯ ಪೊಲೀಸ್ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಪೊಲೀಸರು ವಶಪಡಿಸಿಕೊಂಡಿದ್ದ ವಾಹನವನ್ನು ಪೊಲೀಸ್ ಠಾಣೆಯ ಆವರಣದಲ್ಲಿ ನಿಲ್ಲಿಸಲಾಗಿದ್ದು, ಅದರಿಂದ ಬಿಸ್ಕತ್ ಕದ್ದಿದ್ದ ಎಂಬ ಆರೋಪ ಬಾಲಕ ಮೇಲೆ ಮಾಡಲಾಗಿತ್ತು. ಮಾರ್ಚ್ 21 ರಂದು ಲಹರಿಘಾಟ್ ಪೊಲೀಸ್ ಠಾಣೆಯೊಳಗೆ ಸಿವಿಲ್ ಡ್ರೆಸ್ನಲ್ಲಿದ್ದ ಪೊಲೀಸ್ ಅಧಿಕಾರಿಯೊಬ್ಬರು ಅಪ್ರಾಪ್ತ ಬಾಲಕನಿಗೆ ಥಳಿಸುತ್ತಿರುವ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
ಫೆಬ್ರವರಿ 21 ರಂದು, ಬಿಸ್ಕತ್ತು ಪ್ಯಾಕೆಟ್ಗಳ ಅಡಿಯಲ್ಲಿ ಬಚ್ಚಿಟ್ಟಿದ್ದ ಕೆಲವು ಅಕ್ರಮ ಮದ್ಯದ ಬಾಟಲಿಗಳನ್ನು ಸಾಗಿಸುತ್ತಿದ್ದ ಕಾರಣ ವಾಹನವನ್ನು ವಶಪಡಿಸಿಕೊಳ್ಳಲಾಯಿತು. ಈ ಸಂಬಂಧ ವಾಹನವನ್ನು ವಶಪಡಿಸಿಕೊಂಡು ಠಾಣೆಯ ಆವರಣದಲ್ಲಿ ನಿಲ್ಲಿಸಲಾಗಿತ್ತು. ಕಾನೂನು ಸಂಘರ್ಷಕ್ಕೆ ಒಳಗಾದ ಮಗು ಅದರಲ್ಲಿದ್ದ ಬಿಸ್ಕೆಟ್ ಕಬಳಿಸಲು ಯತ್ನಿಸುತ್ತಿದ್ದ ವೇಳೆ ಪೊಲೀಸ್ ಠಾಣೆಯ ಸಿಬ್ಬಂದಿ ಮಗುವನ್ನು ಹಿಡಿದು ಥಳಿಸಿದ್ದಾರೆ. ಇದೊಂದು ಅತ್ಯಂತ ದುರದೃಷ್ಟಕರ ಘಟನೆ ಎಂದು ಹಿರಿಯ ಪೊಲೀಸ್ ಅಧಿಕಾರಿ ವಿವರಿಸಿದ್ದಾರೆ.