ಬೆಂಗಳೂರು, ಮಾ 23 (DaijiworldNews/DB): ಜಿಲ್ಲೆಗೊಂದು ವಿಶ್ವ ವಿದ್ಯಾನಿಲಯವನ್ನು ಪ್ರಸ್ತುತ ಮಾಡಲಾಗುತ್ತಿದೆ. ಮುಂದೆ ಅದು ತಾಲೂಕಿಗೂ ವಿಸ್ತರಿಸುತ್ತದೆ. ಬಳಿಕ ಸೌತೆಕಾಯಿ, ಬದನೆಕಾಯಿ, ಮೆಣಸಿನಕಾಯಿ ಎಲ್ಲದಕ್ಕೂ ಒಂದೊಂದು ವಿವಿಗಳು ಬರಬಹುದು ಎಂದು ಮಾಜಿ ಸಚಿವ ಕೆ. ಆರ್. ರಮೇಶ್ ಕುಮಾರ್ ವ್ಯಂಗ್ಯವಾಡಿದ್ದಾರೆ.
ಇಲಾಖೆಗಳ ಬೇಡಿಕೆ ಮೇಲಿನ ಚರ್ಚೆಯಲ್ಲಿ ಸದನದಲ್ಲಿ ಮಂಗಳವಾರ ಮಾತನಾಡಿದ ಅವರು, ಜಿಲ್ಲೆಗೊಂದು ವಿಶ್ವ ವಿದ್ಯಾನಿಲಯ ಮಾಡುವ ಅಗತ್ಯ ಏನಿದೆ? ಎಂದು ಪ್ರಶ್ನಿಸಿದರು.
ಜಿಲ್ಲೆಗೊಂದು ವಿವಿ ಬೇಡಿಕೆ ಬರುವುದನ್ನು ಪೂರೈಸಲು ಸರಕಾರ ಮುಂದಾಗುತ್ತಿದೆ. ಇದು ತಾಲೂಕುಗೂ ವಿಸ್ತರಿಸಬಹುದು. ಮುಂದೆ ಸೌತೆಕಾಯಿ, ಬದನೆಕಾಯಿ, ಮೆಣಸಿನ ಕಾಯಿ, ಕೊತ್ತಂಬರಿ ಸೊಪ್ಪು, ಕರಿಬೇವಿನ ಸೊಪ್ಪು ಸೇರಿ ಒಂದೊಂದು ತರಕಾರಿಗೂ ಒಂದೊಂದು ವಿವಿಗಳು ಬರಬಹುದು. ವಿಶ್ವ ವಿದ್ಯಾನಿಲಯಗಳ ಕುಲಪತಿಗಳಾಗಲು ಕೆಲವರು ಕಾದು ಕುಳಿತಿದ್ದಾರೆ ಎಂದು ಲೇವಡಿ ಮಾಡಿದರು.
ಅಲ್ಲಲ್ಲಿ ವಿವಿ ಮಾಡುವುದರಿಂದ ಯಾವುದೇ ಪ್ರಯೋಜನವಿಲ್ಲ. ಕೃಷಿ ಭೂಮಿಗಳಲ್ಲಿ ಬಳ್ಳಾರಿ ಜಾಲಿ ವ್ಯಾಪಿಸಿದೆ. ಕೆರೆಗಳಲ್ಲಿ ಕಳೆ ತುಂಬಿ ಕಳಾಹೀನವಾಗಿವೆ. ಆದರೆ ರಾಜ್ಯದಲ್ಲಿರುವ ಕೃಷಿ ವಿಶ್ವವಿದ್ಯಾನಿಲಯಗಳು ಏನಾದರೂ ಸಂಶೋಧನೆ ನಡೆಸಿ ಕೃಷಿಭೂಮಿಗೆ ಪೂರಕವಾಗುವಂತದ್ದೇನಾದರೂ ಮಾಡಿದ್ದಾರೆ ಎಂದು ಪ್ರಶ್ನೆ ಮಾಡಿದರು.