ಮಹಾರಾಜ್ಗಂಜ್, ಮಾ 23 (DaijiworldNews/DB): ಬಿಜೆಪಿ ಯುವ ಘಟಕದ ಮಾಜಿ ಕಾರ್ಯದರ್ಶಿ, ನ್ಯಾಯವಾದಿ ಗೌರವ್ ಜೈಸ್ವಾಲ್ (35) ಅವರು ದುಷ್ಕರ್ಮಿಗಳ ಗುಂಡೇಟಿಗೆ ಬಲಿಯಾಗಿರುವ ಘಟನೆ ಉತ್ತರ ಪ್ರದೇಶದ ಮಹಾರಾಜ್ಗಂಜ್ ಜಿಲ್ಲೆಯಲ್ಲಿ ನಡೆದಿದೆ.
ದುಷ್ಕರ್ಮಿಗಳು ಜೈಸ್ವಾಲ್ ಅವರ ಹಣೆಗೆ ಶೂಟ್ ಮಾಡಿ ಬಳಿಕ ಸ್ಥಳದಿಂದ ಪರಾರಿಯಾಗಿದ್ದಾರೆ. ಸದರ್ ಪೊಲೀಸ್ ವೃತ್ತದ ಅಡಿಯಲ್ಲಿ ಚಿಯುರಾಹಾ ಕ್ರಾಸಿಂಗ್ ಬಳಿಯಿರುವ ಬಿರಿಯಾನಿ ಅಂಗಡಿ ಬಳಿ ಜೈಸ್ವಾಲ್ ಕುಳಿತಿದ್ದಾಗ ಘಟನೆ ನಡೆದಿದೆ. ಹತ್ಯೆಗೂ ಮುನ್ನ ದುಷ್ಕರ್ಮಿಗಳು ಜೈಸ್ವಾಲ್ ಅವರೊಂದಿಗೆ ವಾಗ್ವಾದಕ್ಕಿಳಿದು ಏಕಾಏಕಿ ಗುಂಡು ಹಾರಿಸಿ ಪರಾರಿಯಾಗಿದ್ದಾರೆ. ತತ್ ಕ್ಷಣ ಅವರನ್ನು ಆಸ್ಪತ್ರೆಗೆ ಸೇರಿಸಲಾಯಿತಾದರೂ, ಆ ವೇಳೆಗಾಗಲೇ ಅವರು ಮೃತಪಟ್ಟಿದ್ದರು ಎಂಬುದಾಗಿ ಪ್ರತ್ಯಕ್ಷದರ್ಶಿಗಳು ಹೇಳಿದ್ದರು ಎಂದು ಮಹಾರಾಜ್ಗಂಜ್ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಗುಪ್ತಾ ತಿಳಿಸಿದ್ದಾರೆ. ಘಟನೆ ಸಂಬಂಧ ಎಫ್ ಐಆರ್ ದಾಖಲಿಸಲಾಗಿದ್ದು, ತನಿಖೆ ನಡೆಯುತ್ತಿದೆ.
ಮನೆಯಲ್ಲಿದ್ದ ಜೈಸ್ವಾಲ್ ಗೆ ಅಪರಿಚಿತ ಸಂಖ್ಯೆಯಿಂದ ಕರೆ ಬಂದಿದ್ದು, ಬಳಿಕ ಅವರು ಹೊರ ಹೋಗಿದ್ದಾರೆ. ಅವರಿಗೆ ಶತ್ರುಗಳು ಯಾರೂ ಇರಲಿಲ್ಲ. ಯಾರಿಗೂ ದ್ವೇಷವೂ ಇರಲಿಲ್ಲ ಎಂಬುದಾಗಿ ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಗೌರವ್ ಜೈಸ್ವಾಲ್ ಅವರು ಮಹಾರಾಜ್ಗಂಜ್ ನಗರ ಪಾಲಿಕೆಯ ಅಧ್ಯಕ್ಷ ಕೃಷ್ಣ ಗೋಪಾಲ್ ಜೈಸ್ವಾಲ್ ಅವರ ಅಳಿಯ. ಬಿಜೆಪಿಯ ಸಕ್ರಿಯ ಕಾರ್ಯಕರ್ತರಾಗಿದ್ದರು. ಜೈಸ್ವಾಲ್ ಹತ್ಯೆ ಸುದ್ದಿ ಹರಡುತ್ತಿದ್ದಂತೆ ಆ ಪ್ರದೇಶದಲ್ಲಿ ವಾತಾವರಣದಲ್ಲಿ ಬಿಗು ಪರಿಸ್ಥಿತಿ ನಿರ್ಮಾಣವಾಗಿತ್ತು. ಆರೋಪಿಗಳನ್ನು ಶೀಘ್ರ ಪತ್ತೆ ಹಚ್ಚುವಂತೆ ಒತ್ತಾಯಿಸಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.