ನವದೆಹಲಿ, ಮಾ 23 (DaijiworldNews/DB): ರಾಷ್ಟ್ರ ರಾಜಧಾನಿಯಲ್ಲಿ ದಾಳಿ ನಡೆಸುವುದಾಗಿ ಭಯೋತ್ಪಾದಕ ಸಂಘಟನೆಯೊಂದರಿಂದ ಅನಾಮಧೇಯ ಇಮೇಲ್ ಬಂದ ಹಿನ್ನೆಲೆಯಲ್ಲಿ ದೆಹಲಿಯಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ.
ದೆಹಲಿಯಲ್ಲಿ ಭಯೋತ್ಪಾದಕ ದಾಳಿ ನಡೆಸುವುದಾಗಿ ಅನಾಮಧೇಯ ಇಮೇಲ್ ನ್ನು ಕೆಲವರು ಸ್ವೀಕರಿಸಿದ್ದಾರೆ. ಈ ಕುರಿತು ಉತ್ತರ ಪ್ರದೇಶದ ಪೊಲೀಸರಿಗೆ ಮಾಹಿತಿ ಲಭ್ಯವಾದ ಹಿನ್ನೆಲೆಯಲ್ಲಿ ತತ್ ಕ್ಷಣ ಈ ಮಾಹಿತಿಯನ್ನು ದೆಹಲಿ ಪೊಲೀಸರಿಗೆ ಮತ್ತು ಭದ್ರತಾ ಏಜೆನ್ಸಿಗಳಿಗೆ ತಿಳಿಸಲಾಯಿತು. ತತ್ ಕ್ಷಣ ಕಾರ್ಯಪ್ರವೃತ್ತರಾದ ಭದ್ರತಾ ಏಜೆನ್ಸಿಗಳು ದೆಹಲಿಯಲ್ಲಿ ಹೈ ಅಲರ್ಟ್ ಹಾಕಿವೆ. ಭಯೋತ್ಪಾದಕ ಸಂಘಟನೆ ತೆಹ್ರಿಕ್-ಎ-ತಾಲಿಬಾನ್ (ಇಂಡಿಯಾ ಸೆಲ್) ನಿಂದ ಎನ್ನಲಾದ ಅನಾಮಧೇಯ ಇಮೇಲ್ ಅನ್ನು ಕೆಲವರು ಸ್ವೀಕರಿಸಿದ್ದಾರೆ ಎಂದು ದೆಹಲಿ ಪೊಲೀಸ್ ವಿಶೇಷ ಸೆಲ್ ಅಧಿಕಾರಿ ತಿಳಿಸಿದ್ದಾರೆ.
ಇದೀಗ ದೆಹಲಿಯಾದ್ಯಂತ ಬಿಗು ಪೊಲೀಸ್ ಬಂದೋಬಸ್ತ್ ಮಾಡಲಾಗಿದ್ದು, ಗಲ್ಲಿಗಲ್ಲಿಗಳಲ್ಲಿ ಪೊಲೀಸರು ಗಸ್ತು ನಿರತರಾಗಿದ್ದಾರೆ. ಇಮೇಲ್ ಕಳುಹಿಸಿದ ವ್ಯಕ್ತಿಯ ಪತ್ತೆಹಚ್ಚುವಿಕೆ ಸಂಬಂಧ ಅಧಿಕಾರಿಗಳು ಈಗಾಗಲೇ ನಿಗಾ ಇಟ್ಟಿದ್ದಾರೆ. ದಾಳಿ ಸಂದೇಶದ ಹಿನ್ನೆಲೆಯಲ್ಲಿ ನವದೆಹಲಿಯ ಸರೋಜನಿ ನಗರ ಮಾರುಕಟ್ಟೆಯಲ್ಲಿ ಮಂಗಳವಾರ ಪೊಲೀಸರು ಶೋಧ ಕಾರ್ಯ ನಡೆಸಿದರು.
ಭದ್ರತಾ ಬೆದರಿಕೆಯಿಂದಾಗಿ ಮಾರುಕಟ್ಟೆಗಳನ್ನು ಮುಚ್ಚಲು ತೀರ್ಮಾನಿಸಿದ್ದೇವೆ ಎಂದು ಸರೋಜಿನಿ ನಗರ ಮಿನಿ ಮಾರುಕಟ್ಟೆ ವ್ಯಾಪಾರಿಗಳ ಸಂಘದ ಅಧ್ಯಕ್ಷ ಅಶೋಕ್ ರಾಂಧವ ತಿಳಿಸಿದ್ದಾರೆ.