ನವದೆಹಲಿ, ಮಾ 23 (DaijiworldNews/MS): ಮುಂದಿನ ವಾರ ಬ್ಯಾಂಕ್ ಎರಡು ದಿನ ಮಾತ್ರ ಕಾರ್ಯನಿರ್ವಹಿಸಲಿದೆ. ಮಾರ್ಚ್ 27 ರಿಂದ ಏಪ್ರಿಲ್ 3 ವರೆಗಿನ ಅವಧಿಯಲ್ಲಿ ನಿಮಗೇನಾದ್ರೂ ಬ್ಯಾಂಕ್ ಕೆಲಸಗಳಿದ್ದರೆ ಬೇಗನೆ ಮುಗಿಸಿಕೊಳ್ಳುವುದು ಒಳಿತು.
ಮುಂದಿನ ವಾರ ಬ್ಯಾಂಕ್ ನೌಕರರ ಮುಷ್ಕರ ಮತ್ತು ರಜೆ ಸೇರಿದಂತೆ ಕೇವಲ ಎರಡು ದಿನಗಳು ಮಾತ್ರ ಬ್ಯಾಂಕ್ ಕಾರ್ಯನಿರ್ವಹಿಸಲಿದ್ದು, ಬ್ಯಾಂಕಿಗೆ ಸಂಬಂಧಿಸಿದ ತಮ್ಮ ಯಾವುದೇ ವಹಿವಾಟು, ವ್ಯವಹಾರಗಳಿದ್ದಲ್ಲಿ ಶೀಘ್ರವೇ ಮುಗಿಸಿಕೊಳ್ಳಿ.
ಮಾರ್ಚ್ 27 ರಂದು ಭಾನುವಾರ ಎಂದಿನಂತೆ ರಜೆ ಇದ್ದು, ವಿವಿಧ ಉದ್ಯೋಗಿಗಳ ಸಂಘಟನೆಗಳು ಮಾರ್ಚ್ 28-29 ರಂದು ಎರಡು ದಿನಗಳ ಮುಷ್ಕರಕ್ಕೆ ಕರೆ ನೀಡಿರುವುದರಿಂದ ಅಂದು ಬ್ಯಾಂಕಿಂಗ್ ಸೇವೆಗಳ ಮೇಲೆ ಪರಿಣಾಮ ಬೀರಲಿದೆ. ಸಾರ್ವಜನಿಕ ವಲಯದ ಬ್ಯಾಂಕ್ಗಳನ್ನು ಖಾಸಗೀಕರಣಗೊಳಿಸುವ ಸರ್ಕಾರದ ಕ್ರಮ ಮತ್ತು ಬ್ಯಾಂಕಿಂಗ್ ಕಾನೂನುಗಳ ತಿದ್ದುಪಡಿ ಮಸೂದೆ 2021 ಅನ್ನು ವಿರೋಧಿಸಿ ಮುಷ್ಕರಕ್ಕೆ ಕರೆ ನೀಡಲಾಗಿದೆ.
ಮಾರ್ಚ್ 30 ಮತ್ತು 31 ರಂದು ಮಾತ್ರ ಬ್ಯಾಂಕ್ ಕಾರ್ಯನಿರ್ವಹಿಸಲಿದ್ದು , ಏಪ್ರಿಲ್ 1 ರಂದು ಹಣಕಾಸು ವರ್ಷ ಆರಂಭವಾಗುವುದರಿಂದ ಬ್ಯಾಂಕ್ ಸೇವೆ ಇರುವುದಿಲ್ಲ.ಏಪ್ರಿಲ್ 2 ರಂದು ಯುಗಾದಿಗೆ ರಜೆ ಹಾಗೂ ಏಪ್ರಿಲ್ 3 ರಂದು ಭಾನುವಾರ ರಜೆ ಇದೆ. ಹೀಗಾಗಿ ಮಾರ್ಚ್ 28 ರಿಂದ ಏಪ್ರಿಲ್ 3 ರವರೆಗೆ ಎಂಟು ದಿನಗಳಲ್ಲಿ ಆರು ದಿನಗಳಿಗೆ ಬ್ಯಾಂಕಿಗೆ ರಜೆ ಇರುತ್ತದೆ.