ಬೆಂಗಳೂರು, ಮಾ 22 (DaijiworldNews/DB): ಮೇಕೆದಾಟು ಯೋಜನೆ ವಿರೋಧಿಸಿ ತಮಿಳುನಾಡು ವಿಧಾನಸಭೆಯಲ್ಲಿ ನಿರ್ಣಯ ಅಂಗೀಕರಿಸಿರುವುದನ್ನು ಖಂಡಿಸಿ ಕರ್ನಾಟಕ ವಿಧಾನಸಭೆಯಲ್ಲಿ ಬುಧವಾರವೇ ಪ್ರತಿ ನಿರ್ಣಯ ಮಂಡಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಿಸಿದ್ದಾರೆ.
ಈ ಕುರಿತು ಮಂಗಳವಾರ ಘೋಷಣೆ ಮಾಡಿದ ಸಿಎಂ, ಕಾನೂನು ತಜ್ಞರ ಜೊತೆ ಇಂದು ಸಂಜೆಯೇ ಚರ್ಚಿಸಲಾಗುವುದು. ಮೇಕೆದಾಟು ಯೋಜನೆಯನ್ನು ಜಾರಿಗೊಳಿಸಿಯೇ ಸಿದ್ಧ ಎಂದು ತಿಳಿಸಿದರು.
ತಮಿಳುನಾಡು ಸರ್ಕಾರ ನಿರ್ಣಯ ಕೈಗೊಂಡ ವಿಷಯವನ್ನು ಕಲಾಪದಲ್ಲಿ ಶೂನ್ಯ ವೇಳೆಯಲ್ಲಿ ಕಾಂಗ್ರೆಸ್ ಸದಸ್ಯ ಎಚ್. ಕೆ. ಪಾಟೀಲ್ ಪ್ರಸ್ತಾಪಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಿಎಂ ಬೊಮ್ಮಾಯಿ, ಮೇಕೆದಾಟು ಯೋಜನೆ ವಿಚಾರದಲ್ಲಿ ವಿಳಂಬ ಮಾಡುವುದು ಸರಿಯಲ್ಲ. ಬುಧವಾರವೇ ನಿರ್ಣಯ ಮಾಡಲಾಗುವುದು ಎಂದರು.
ಈ ಯೋಜನೆ ಕುಡಿಯುವ ನೀರು ಮತ್ತು ವಿದ್ಯುತ್ ಉತ್ಪಾದನೆಗಾಗಿ ರೂಪುಗೊಂಡಿದೆ. ತಮಿಳುನಾಡಿಗೆ ಹೋಗುವ ಹೆಚ್ಚುವರಿ ನೀರನ್ನಷ್ಟೇ ಬಳಕೆ ಮಾಡಲಾಗುತ್ತದೆಯೇ ಹೊರತು ಆ ರಾಜ್ಯಕ್ಕೆ ಇದರಿಂದ ಯಾವುದೇ ಸಮಸ್ಯೆ ಉಂಟಾಗುವುದಿಲ್ಲ.ಆದರೂ ಯೋಜನೆಗೆ ಅಡ್ಡಗಾಲು ಹಾಕುವ ಪ್ರಯತ್ನ ತಮಿಳುನಾಡು ರಾಜಕೀಯ ನಾಯಕರಿಂದ ಆಗುತ್ತಿದೆ ಎಂದು ಅವರು ತಿಳಿಸಿದರು.
ಹೊಗೇನಕಲ್ ಎರಡನೇ ಹಂತದ ಯೋಜನೆ ಕೈಗೆತ್ತಿಕೊಳ್ಳುವುದಾಗಿ ಹೇಳುತ್ತಿರುವ ತಮಿಳುನಾಡು ಸರ್ಕಾರ ನಮ್ಮ ನೀರಿನ ಹಕ್ಕಿಗೆ ವ್ಯತಿರಿಕ್ತವಾಗಿ ನಡೆದುಕೊಳ್ಳುತ್ತಿದೆ. ನಮ್ಮ ರಾಜ್ಯದಲ್ಲಿ ಹುಟ್ಟಿದ ಕಾವೇರಿ ನೀರನ್ನು ನಾವು ಬಳಕೆ ಮಾಡುವುದಕ್ಕೆ ತಮಿಳುನಾಡು ಅಡ್ಡಿಯಾಗುತ್ತಿರುವುದನ್ನು ನಾವು ಸಹಿಸುವುದಿಲ್ಲ ಎಂದು ಸಿಎಂ ಬೊಮ್ಮಾಯಿ ಸದನದ ಮುಂದೆ ಪ್ರಸ್ತಾಪಿಸಿದರು.
ಮೇಕೆದಾಟು ಯೋಜನೆಯನ್ನು ಕೇಂದ್ರಕ್ಕೂ ಮನವರಿಕೆ ಮಾಡಿ ಒತ್ತಾಯಿಸಲಾಗುವುದು. ನಮಗೆ ಡಿಪಿಆರ್ ಹಾಗೂ ಪರಿಸರ ಇಲಾಖೆಯ ಅನುಮತಿ ಸಿಗಬೇಕು. ಯೋಜನೆ ಕಾರ್ಯಗತಗೊಳಿಸಲು ಬೇಕಾದ ಎಲ್ಲಾ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಯೋಜನೆ ಜಾರಿಗೊಳಿಸಿಯೇ ಸಿದ್ಧ ಎಂದರು.