ಭೋಪಾಲ್, ಮಾ 22 (DaijiworldNews/HR): ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ ಕೊಲೆ ಮಾಡಿರುವ ಪ್ರಕರಣದ ಪ್ರಮುಖ ಆರೋಪಿಯ ಮನೆಯನ್ನು ಸರ್ಕಾರ ಕೆಡವಿ ಹಾಕಿರುವ ಘಟನೆ ಮಧ್ಯಪ್ರದೇಶದ ಶಾಹದೋಲ್ ಜಿಲ್ಲೆಯಲ್ಲಿ ನಡೆದಿದೆ.
ಸಾಂದರ್ಭಿಕ ಚಿತ್ರ
ಯುವತಿಯ ಮೇಲೆ ಶಾದಾಬ್ ಉಸ್ಮಾನಿ, ರಾಜೇಶ್ ಸಿಂಗ್ ಮತ್ತು ಸೋನು ಜಾರ್ಜ್ ಎಂಬ ಮೂವರು ಸೇರಿ ಸಾಮೂಹಿಕ ಅತ್ಯಾಚಾರ ಎಸಗಿ ಕೊಲೆ ಮಾಡಿದ್ದರು.
ಈ ಘಟನೆಗೆ ಸಂಬಂಧಿಸಿದಂತೆ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರ ಬಿಜೆಪಿ ಸರ್ಕಾರದ ಮೇಲೆ ವಿಪಕ್ಷಗಳು ಭಾರಿ ವಾಗ್ದಾಳಿ ನಡೆಸಿದ್ದು, ಇದರ ಬೆನ್ನಲ್ಲೇ ಮುಖ್ಯಮಂತ್ರಿ ನಿರ್ದೇಶನದ ಮೇರೆಗೆ ಗ್ಯಾಂಗ್ ರೇಪ್ನ ಪ್ರಮುಖ ಆರೋಪಿ ಶಾದಾಬ್ ಉಸ್ಮಾನಿಯ ಮನೆಯನ್ನು ಕೆಡವಲಾಗಿದ್ದು, ಇನ್ನುಳಿದ ಇಬ್ಬರು ಆರೋಪಿಗಳು ಬಾಡಿಗೆ ಮನೆಯಲ್ಲಿ ವಾಸವಾಗಿರುವುದಾಗಿ ಹೇಳಲಾಗಿದೆ.
ಆರೋಪಿ ಶಾದಾಬ್ ಉಸ್ಮಾನಿ ಒಂದೂವರೆ ವರ್ಷಗಳಿಂದ ಯುವತಿಯೊಂದಿಗೆ ಸಂಬಂಧ ಹೊಂದಿದ್ದು, ಈಕೆಯನ್ನು ಜಿಲ್ಲಾ ಕೇಂದ್ರವಾದ ಶಾಹದೋಲ್ನಿಂದ 20 ಕಿಮೀ ದೂರದಲ್ಲಿರುವ ಕ್ಷೀರಸಾಗರ್ ಪ್ರದೇಶದಲ್ಲಿ ಶಾದಾಬ್ ತನ್ನ ಇಬ್ಬರು ಸ್ನೇಹಿತರ ಜತೆ ಪಿಕ್ನಿಕ್ಗೆ ಕರೆದುಕೊಂಡು ಹೋಗಿ ಅಲ್ಲಿ ಮೂವರೂ ಸೇರಿ ಕಂಠಪೂರ್ತಿ ಕುಡಿದು ಸಂತ್ರಸ್ತೆಗೂ ಕುಡಿಸಿ ನಂತರ ಆಕೆಯ ಮೇಲೆ ಗ್ಯಾಂಗ್ರೇಪ್ ಮಾಡಿ ವಿಷ ಹಾಕಿದ್ದಾರೆ ಎನ್ನಲಾಗಿದೆ.