ನವದೆಹಲಿ, ಮಾ 22 (DaijiworldNews/DB): ಪೆಟ್ರೋಲ್, ಡೀಸೆಲ್ ಮತ್ತು ಅಡುಗೆ ಅನಿಲ ಬೆಲೆ ಏರಿಕೆ ವಿರೋಧಿಸಿ ಪ್ರತಿಭಟನೆ ನಡೆಸಿದ ಪ್ರತಿಪಕ್ಷಗಳು ಬಳಿಕ ಸಭಾತ್ಯಾಗ ಮಾಡಿದ ಪ್ರಸಂಗ ಲೋಕಸಭೆಯಲ್ಲಿ ಮಂಗಳವಾರ ನಡೆಯಿತು.
ಪ್ರಶ್ನೋತ್ತರ ಕಲಾಪದ ವೇಳೆ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಮಾತನಾಡಿ, ಜನರ ಮೂಲಭೂತ ಅಗತ್ಯಗಳಾದ ಪೆಟ್ರೋಲ್, ಡೀಸೆಲ್, ಅಡುಗೆ ಅನಿಲದ ಬೆಲೆ ನಿರಂತರವಾಗಿ ಏರುತ್ತಲೇ ಇದೆ. ಪಂಚರಾಜ್ಯ ಚುನಾವಣೆ ಫಲಿತಾಂಶ ಹೊರ ಬಿದ್ದ ಬಳಿಕ ಬೆಲೆ ಏರಿಕೆಯನ್ನು ಕೇಂದ್ರ ಸರ್ಕಾರ ಮಾಡಲಿದೆ ಎಂಬುದಾಗಿ ವಿರೋಧ ಪಕ್ಷಗಳು ಮೊದಲೇ ಹೇಳಿದ್ದವು. ಅದರಂತೆಯೇ ಈಗ ಆಗಿದೆ ಎಂದರು.
ಕಾಂಗ್ರೆಸ್, ಟಿಎಂಸಿ, ಎನ್ ಸಿಪಿ, ಡಿಎಂಕೆ ಮತ್ತು ಎಡ ಪಕ್ಷಗಳ ಸದಸ್ಯರು ಏರುಧ್ವನಿಯಲ್ಲಿ ಮಾತನಾಡಿ, ಬೆಲೆ ಏರಿಕೆಯಿಂದ ಜನ ಜೀವನ ದುಸ್ತರವಾಗಿದೆ. ಕೊರೊನಾ ನಂತರ ಮೊದಲೇ ಜನರ ಬಳಿ ಹಣಕಾಸಿನ ಮುಗ್ಗಟ್ಟು ಎದುರಾಗಿದೆ. ಹೀಗಿರುವಾಗ ಅಗತ್ಯ ಇಂಧನಗಳ ಬೆಲೆ ನಿರಂತರವಾಗಿ ಏರಿಕೆಯಾದರೆ ಜೀವನ ನಿರ್ವಹಣೆ ಇನ್ನಷ್ಟು ಹದಗೆಡಲಿದೆ ಎಂದರು.
ಬಳಿಕ ಬೆಲೆ ಏರಿಕೆ ಹಿಂಪಡೆಯಬೇಕು ಎಂದು ಕುಳಿತಲ್ಲಿಂದಲೇ ಒತ್ತಾಯಿಸಿದರು. ಅಲ್ಲದೆ, ಬೆಲೆ ಏರಿಕೆ ವಿರುದ್ಧ ಘೋಷಣೆ ಕೂಗಿ ಬಳಿಕ ಸಭಾತ್ಯಾಗ ಮಾಡಿದರು.