ನವದೆಹಲಿ, ಮಾ 22 (DaijiworldNews/DB): ಸಮಾಜವಾದಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಖಿಲೇಶ್ ಯಾದವ್ ಸಂಸದ ಸ್ಥಾನಕ್ಕೆ ಮಂಗಳವಾರ ರಾಜೀನಾಮೆ ನೀಡಿದ್ದಾರೆ. ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರನ್ನು ಭೇಟಿಯಾಗಿ ಯಾದವ್ ರಾಜೀನಾಮೆ ಪತ್ರ ಸಲ್ಲಿಸಿದರು.
ಅವರು ಅಜಂಗಢದ ಲೋಕಸಭಾ ಸಂಸದರಾಗಿದ್ದರು. ಉತ್ತರ ಪ್ರದೇಶದಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಮೈನ್ ಪುರಿ ಜಿಲ್ಲೆಯ ಕರ್ಹಾಲ್ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ಅವರು, ಬಿಜೆಪಿಯ ಎಸ್.ಪಿ. ಸಿಂಗ್ ಬಘೇಲ್ ಅವರ ವಿರುದ್ಧ ಜಯ ಗಳಿಸಿದ್ದರು.
ಸಮಾಜವಾದಿ ಪಕ್ಷದ ಭದ್ರಕೋಟೆಯಾಗಿರುವ ಕರ್ಹಾಲ್ ನಲ್ಲಿ ಮೊದಲ ಬಾರಿಗೆ ಯಾದವ್ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು.