ನೋಯ್ದಾ, ಮಾ 22 (DaijiworldNews/MS): ಯೋಗಿ ಆದಿತ್ಯನಾಥ್ ಅವರ ಸರ್ಕಾರದಲ್ಲಿ ಈ ಹಿಂದೆ ಮಹಿಳಾ ಕಲ್ಯಾಣ ಸಚಿವೆಯಾಗಿದ್ದ ಸ್ವಾತಿ ಸಿಂಗ್ ಅವರು ತಮ್ಮ ಪತಿಯಿಂದ ವಿಚ್ಛೇದನಕ್ಕೆ ಕೋರಿದ್ದಾರೆ.
ಇತ್ತೀಚೆಗೆ ನಡೆದ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಸ್ವಾತಿ ಅವರಿಗೆ ಪಕ್ಷ ಟಿಕೆಟ್ ನಿರಾಕರಿಸಿತ್ತು. ಆದರೆ ಅವರ ಪತಿ ದಯಾಶಂಕರ್ ಸಿಂಗ್ , ಬಾಲಿಯಾ ಕ್ಷೇತ್ರದಿಂದ ಭಾರತೀಯ ಜನತಾ ಪಕ್ಷದ (ಬಿಜೆಪಿ) ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆದ್ದಿದ್ದರು.
ಪತಿ ದಯಾಶಂಕರ್ ಪಕ್ಷದ ಟಿಕೆಟ್ ಪಡೆಯಲು ತನ್ನ ವಿರುದ್ಧ ಷಡ್ಯಂತ್ರ ನಡೆಸುತ್ತಿದ್ದಾರೆ ಎಂದು ಸ್ವಾತಿ ಅವರು ವಿಧಾನಸಭಾ ಚುನಾವಣೆಗೆ ಮುನ್ನ ಆರೋಪಿಸಿದ್ದು, ಈ ವೇಳೆ ತಮ್ಮಿಬ್ಬರ ದಾಂಪತ್ಯ ಸರಿ ಇಲ್ಲವೆನ್ನುವುದನ್ನು ಹೊರಗೆಡವಿದ್ದರು.
ಸ್ವಾತಿ ಅವರು 2017 ರ ವಿಧಾನಸಭಾ ಚುನಾವಣೆಯಲ್ಲಿ ಲಕ್ನೋದ ಸರೋಜಿನಿ ನಗರ ಕ್ಷೇತ್ರದಿಂದ ಸ್ವರ್ಧಿಸಿ ಗೆದ್ದು ಯೋಗಿ ಸಂಪುಟದಲ್ಲಿ ಸಚಿವೆಯಾಗಿದ್ದರು. ಆದರೆ ಈ ವರ್ಷ ಅವರ ಕ್ಷೇತ್ರದಿಂದ ಮಾಜಿ ಜಾರಿ ನಿರ್ದೇಶನಾಲಯದ ಅಧಿಕಾರಿ ರಾಜೇಶ್ವರ್ ಸಿಂಗ್ ಅವರಿಗೆ ಟಿಕೆಟ್ ನೀಡಲಾಗಿತ್ತು. ಬಿಜೆಪಿಯ ರಾಜ್ಯ ಪದಾಧಿಕಾರಿಯೂ ಆಗಿರುವ ಅವರ ಪತಿಗೆ ಬಲಿಯಾ ನಗರದಿಂದ ಟಿಕೆಟ್ ನೀಡಲಾಗಿತ್ತು.
ಮಾಜಿ ಸಚಿವರ ಆಪ್ತ ಮೂಲಗಳ ಪ್ರಕಾರ 2012 ರಲ್ಲಿ ವಿಚ್ಛೇದನದ ಮೊಕದ್ದಮೆಯನ್ನು ಆರಂಭದಲ್ಲಿ ದಾಖಲಿಸಲಾಗಿತ್ತು ಆದರೆ ಸ್ವಾತಿ ಅವರು ಯುಪಿ ಸರ್ಕಾರದಲ್ಲಿ ಸಚಿವರಾದ ನಂತರ ಅದನ್ನು ಮುಂದುವರಿಸುವುದನ್ನು ನಿಲ್ಲಿಸಿದ್ದರು. ಎರಡೂ ಪಕ್ಷಗಳು ವಿಚಾರಣೆಗೆ ಕೋರ್ಟ್ ಗೆ ತೆರಳದ ಕಾರಣ ನ್ಯಾಯಾಲಯವು 2018 ರಲ್ಲಿ ಪ್ರಕರಣವನ್ನು ವಜಾಗೊಳಿಸಿತ್ತು. . ಆದರೆ, ಕಳೆದ ವಾರ ಸ್ವಾತಿ ಸಿಂಗ್ ಮತ್ತೆ ಕೌಟುಂಬಿಕ ನ್ಯಾಯಾಲಯದ ಮೊರೆ ಹೋಗಿ ವಿಚ್ಛೇದನ ಕೇಳಿದ್ದರು. ಕೌಟುಂಬಿಕ ನ್ಯಾಯಾಲಯದಲ್ಲಿ ಹೆಚ್ಚುವರಿ ಪ್ರಧಾನ ನ್ಯಾಯಾಧೀಶರು (ಎಪಿಜೆ) ಸುಚಿ ಶ್ರೀವಾಸ್ತವ ಅವರು ಈ ಪ್ರಕರಣದ ಆದೇಶವನ್ನು ಕಾಯ್ದಿರಿಸಿದ್ದಾರೆ. ಈ ಪ್ರಕರಣದ ಮುಂದಿನ ವಿಚಾರಣೆಯನ್ನು ಮೇ 5ಕ್ಕೆ ನಿಗದಿಪಡಿಸಲಾಗಿದೆ.
ಈ ನಡುವೆ, ವಿಚ್ಛೇದನ ಪ್ರಕರಣದ ಪುನರಾರಂಭವು ಶುಕ್ರವಾರದಂದು ಪ್ರಮಾಣ ವಚನ ಸ್ವೀಕರಿಸುವ ಯೋಗಿ ಸಂಪುಟದಲ್ಲಿ ಸ್ಥಾನಕ್ಕಾಗಿ ಕಣ್ಣಿಟ್ಟಿರುವ ಬಿಜೆಪಿ ಶಾಸಕ ದಯಾಶಂಕರ್ ಸಿಂಗ್ಗೆ ಹಿನ್ನಡೆಯಾಗುವ ಸಾಧ್ಯತೆ ಇದೆ.