ಬೆಂಗಳೂರು, ಮಾ 22 (DaijiworldNews/DB): ಮೇಕೆದಾಟು ಯೋಜನೆಗೆ ಕೇಂದ್ರ ಸರ್ಕಾರ ಅನುಮತಿ ನೀಡಬಾರದು ಎಂಬುದಾಗಿ ತಮಿಳುನಾಡು ವಿಧಾನಸಭೆಯಲ್ಲಿ ಸರ್ವ ಪಕ್ಷಗಳು ಮಾಡಿರುವ ನಿರ್ಣಯಕ್ಕೂ ನಮಗೂ ಸಂಬಂಧವಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಂಗಳವಾರ ಮಾತನಾಡಿದ ಅವರು, ತಮಿಳುನಾಡು ಕರ್ನಾಟಕ ಸೇರಿದಂತೆ ಗಡಿ ರಾಜ್ಯಗಳ ಮೇಲೆ ನಿರಂತರವಾಗಿ ಒತ್ತಡ ಹೇರುತ್ತಲೇ ಬಂದಿದೆ. ಕುಡಿಯುವ ನೀರಿಗೆ ತಕರಾರಿಲ್ಲ ಎಂಬುದಾಗಿ ಅಲ್ಲಿನ ವಕೀಲರೇ ಹೇಳಿದ್ದಾರೆ. ನಮಗೆ ಎನ್ವಿರಾನ್ಮೆಂಟ್ ಕ್ಲಿಯರೆನ್ಸ್ ನ್ನು ನೀಡಿ ಯೋಜನೆ ಶೀಘ್ರ ಜಾರಿಯಾಗುವಂತೆ ಕೇಂದ್ರ ಸರಕಾರ ಅವಕಾಶ ಕಲ್ಪಿಸಬೇಕು. ನಮ್ಮ ನೀರು ನಾವು ಪಡೆದುಕೊಳ್ಳಬೇಕು. ತಮಿಳುನಾಡು ವಿಧಾನಸಭೆಯಲ್ಲಿ ಪಾಸ್ ಮಾಡಿರುವ ಬಿಲ್ ಗೂ ನಮಗೂ ಸಂಬಂಧವಿಲ್ಲ ಎಂದರು.
ಮೇಕೆದಾಟು ಯೋಜನೆಯನ್ನು ಬಳಸಿಕೊಳ್ಳುವ ಬಗೆ ಹೇಗೆ ಎಂಬ ಬಗ್ಗೆ ದೇವೆಗೌಡರು ಸರ್ಕಾರಕ್ಕೆ ಎರಡು ರೀತಿಯ ಸಲಹೆ ನೀಡಿದ್ದರು. ನಾನೂ ಸದನದಲ್ಲಿ ಈ ಬಗ್ಗೆ ಮಾತನಾಡಿದ್ದೇನೆ. ಸರ್ವಪಕ್ಷ ನಾಯಕರ ನಿಯೋಗವನ್ನು ದೆಹಲಿಗೆ ಕರೆದೊಯ್ಯುವ ವಿಚಾರವನ್ನು ಈಗಾಗಲೇ ಹೇಳಿದ್ದಾರೆ ಎಂದವರು ತಿಳಿಸಿದರು.